ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ , ಎರಡು ದಿನಗಳ ಈಜಿಪ್ಟ್ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಮಧ್ಯರಾತ್ರಿ 12:30ರ ಸುಮಾರಿಗೆ ಪ್ರಧಾನಿ ಮೋದಿಯವರ ವಿಮಾನವು ಪಾಲಂ ವಿಮಾನ ನಿಲ್ದಾಣವನ್ನು ತಲುಪಲಿದೆ. ಪ್ರಧಾನಿಯವರ ಅದ್ಧೂರಿ ಸ್ವಾಗತಕ್ಕೆ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ.
ಜೂನ್ 20 ರಂದು ಅಮೆರಿಕಕ್ಕೆ ತಮ್ಮ ಮೊದಲ ಪ್ರವಾಸ ಕೈಗೊಂಡ ಮೋದಿ, ಅಲ್ಲಿ, ಜೂನ್ 21 ರಂದು ನ್ಯೂಯಾರ್ಕ್‌ನಲ್ಲಿರುವ ಯುಎನ್ ಪ್ರಧಾನ ಕಚೇರಿಯಲ್ಲಿ ಮೊದಲು ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು. ಬಳಿಕ ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆಸಭೆ ನಡೆಸಿದರು. ನಂತರ ಪ್ರಧಾನಿ ಮೋದಿಗೆ ವೈಟ್ ಹೌಸ್’ನಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಅಲ್ಲದೆ ಅವರು ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಅಮೆರಿಕದೊಂದಿಗೆ ಹಲವು ಒಪ್ಪಂದಗಳನ್ನ ಮಾಡಿಕೊಂಡಿದ್ದಲ್ಲದೆ, ಅಮೆರಿಕ ಸಂಸತ್ತಿನಲ್ಲಿಯೂ ಪ್ರಧಾನಿ ಮಾತನಾಡಿದರು.
ಈಜಿಪ್ಟ್‌ಗೆ ಎರಡು ದಿನಗಳ ಪ್ರವಾಸ
ಅಮೆರಿಕಕ್ಕೆ ಭೇಟಿ ನೀಡಿದ ನಂತರ ಎರಡು ದಿನಗಳ ಈಜಿಪ್ಟ್ ಪ್ರವಾಸದಲ್ಲಿ ಪ್ರಧಾನಿ ಶನಿವಾರ (ಜೂನ್ 24) ಕೈರೋ ತಲುಪಿದರು. ಈಜಿಪ್ಟ್ ಅಧ್ಯಕ್ಷ ಅಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಈಜಿಪ್ಟ್ ಪ್ರವಾಸ ಕೈಗೊಂಡಿದ್ದಾರೆ. ಎರಡು ದೇಶಗಳ ನಡುವಿನ ಕಾರ್ಯತಂತ್ರದ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಸೇರಿದಂತೆ ಈಜಿಪ್ಟ್ ನಾಯಕತ್ವದೊಂದಿಗೆ ಮಾತುಕತೆ ನಡೆಸಿದರು.
ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಪುನಃಸ್ಥಾಪಿಸಲಾದ 11 ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಪ್ರಧಾನಿ ಭಾನುವಾರ ಭೇಟಿ ನೀಡಿದರು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಕೈರೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.