ಪ್ರಧಾನಿ ಭೇಟಿಯ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಪ್ರಧಾನಿ ಮೋದಿಯವರು ಆ.28ರ ಸಂಜೆ ಜಪಾನ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಆ.29 ಮತ್ತು 30ರಂದು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಹಲವು ಕಾರಣಗಳಿಗಾಗಿ ಪ್ರಮುಖ ಭೇಟಿಯಾಗಿದೆ.
ಪ್ರಧಾನಿ ಮೋದಿಯವರು ಹಾಗೂ ಪ್ರಧಾನಿ ಇಶಿಬಾ ಅವರೊಂದಿಗೆ ನಡೆಸುತ್ತಿರುವ ಮೊದಲ ವಾರ್ಷಿಕ ಶೃಂಗಸಭೆ ಇದಾಗಿದೆ. ಸುಮಾರು 7 ವರ್ಷಗಳಲ್ಲಿ ಜಪಾನ್ ಜೊತೆಗಿನ ಮೊದಲ ಏಕವ್ಯಕ್ತಿ ಭೇಟಿಯಾಗಿದೆ. ಅವರು ಕೊನೆಯ ಬಾರಿಗೆ 2018ರಲ್ಲಿ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಭೇಟಿ ನೀಡಿದ್ದರು. 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಜಪಾನ್‌ಗೆ ಪ್ರಧಾನಿ ಮೋದಿಯವರ ಎಂಟನೇ ಭೇಟಿಯಾಗಿದೆ. ಇದೇ ವೇಳೆ ಜಪಾನ್‌ನ ಇತರ ಹಲವಾರು ರಾಜಕೀಯ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದವನ್ನೂ ನಡೆಸಲಿದ್ದಾರೆ. ಈ ಸಂವಾದಗಳು ಎರಡೂ ದೇಶಗಳ ನಡುವಿನ ಪ್ರಮುಖ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಗಾಢವಾಗಿಸುವ ಗುರಿಯನ್ನು ಹೊಂದಿವೆ.