ಪ್ರಧಾನಿ ನರೇಂದ್ರ ಮೋದಿ ಆಡಳಿತ ವಿಕಸಿತ ಭಾರತಕ್ಕೆ ಭದ್ರ ಬುನಾದಿಯಾಗಿದೆ: ಛಲವಾದಿ

ಹೊಸದಿಗಂತ ಚಿತ್ರದುರ್ಗ

2014 ರಿಂದ ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮೂಲಮಂತ್ರದಡಿ, ಸವಲತ್ತು ಪಡೆದ ಕೆಲವರಿಗೆ ಮಾತ್ರವಲ್ಲದೆ ಎಲ್ಲರನ್ನೂ ಒಳಗೊಳ್ಳುವ ವಿಶಿಷ್ಟ ಅಭಿವೃದ್ಧಿ ಮಾದರಿಯನ್ನು ನರೇಂದ್ರ ಮೋದಿ ಸರ್ಕಾರ ಪರಿಚಯಿಸಿ, ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಕ್ರಿಯೆ ಆರಂಭಿಸಿತು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಚಿತ್ರದುರ್ಗ ನಗರದ ಖಾಸಗಿ ಹೋಟೆಲ್‌ನಲ್ಲಿ ಮೋದಿ ಸರ್ಕಾರದ 11 ವರ್ಷಗಳ ಸಾಧನೆಯ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲ್ಲದೇ ಪ್ರತಿಯೊಂದು ಹೆಜ್ಜೆಯೂ ’ಭಾರತ ಮೊದಲು’ ಎಂಬ ಬದ್ಧತೆಯೊಂದಿಗೆ ಮುನ್ನಡೆಯುತ್ತಿರುವ ನಿರ್ಣಾಯಕ ನಾಯಕತ್ವವನ್ನು ಜಗತ್ತಿಗೆ ಸಾರಿ ಹೇಳಿದೆ ಎಂದರು.
ಕಳೆದ ೧೧ ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ದಶಕಗಳ ಜಡತ್ವ ಮುರಿದು, ದಿಟ್ಟ ನಿರ್ಧಾರಗಳ ಮೂಲಕ ’ವಿಕಸಿತ ಭಾರತಕ್ಕೆ ಭದ್ರ ಬುನಾದಿ’ ಹಾಕಿದೆ.

ಇಂದು ನಾವು ಜಲ ಜೀವನ್ ಮಿಷನ್‌ನ ಹರ್ ಘರ್ ಜಲ್ ಯೋಜನೆಯಡಿ ಕುಡಿಯುವ ನೀರು, ಹರ್ ಘರ್ ಬಿಜಲಿ ಯೋಜನೆಯಡಿ ವಿದ್ಯುತ್ ಸಂಪರ್ಕ, ಉತ್ತಮ ಆರೋಗ್ಯ ಸೇವೆಗಳು, ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛ ಶೌಚಾಲಯಗಳು, ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ‍್ಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಗುಣಮಟ್ಟದ ಶಿಕ್ಷಣ ಮತ್ತು ಸೂರು ಇಲ್ಲದವರಿಗೆ ವಸತಿ ಸೌಲಭ್ಯಗಳಂತಹ ಅಗತ್ಯ ಸೌಕರ್ಯಗಳನ್ನು ಪ್ರತಿಯೊಬ್ಬ ಭಾರತೀಯನಿಗೆ ಖಾತರಿಪಡಿಸಿದ್ದಾರೆ. ಇದು ಕೇವಲ ಒಂದು ಕನಸಾಗಿ ಉಳಿದಿಲ್ಲ. ಇದು ನಮ್ಮ ಮೋದಿ ಸರ್ಕಾರದ ಬದ್ಧತೆಯಾಗಿದೆ. ಗ್ಯಾರಂಟಿಯಾಗಿದೆ ಎಂದು ಹೇಳಿದರು.

ಈ ಕಾರ್ಯಾಗಾರದಲ್ಲಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಎ ಮುರುಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಬಾಳೆಕಾಯಿ ರಾಮದಾಸ್, ಜಿ.ಟಿ. ಸುರೇಶ್, ಅಭಿಯಾನದ ಪ್ರಮುಖರಾದ ಡಾ. ಮಂಜುನಾಥ್, ಜಿ.ಹೆಚ್.ಮೋಹನ್ ಕುಮಾರ್, ಸಿಂಧು, ಅಶೋಕ್, ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!