Saturday, October 25, 2025

ಮಲೇಷ್ಯಾಗೆ ಬರೋದಿಲ್ಲ, ವರ್ಚ್ಯುಯಲ್‌ ಆಗಿ ಭಾಗವಹಿಸ್ತೇನೆ ಎಂದ ಪ್ರಧಾನಿ, ಟ್ರಂಪ್‌ಗೆ ನಿರಾಸೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಸೆಗೆ ಪ್ರಧಾನಿ ನರೇಂದ್ರ ಮೋದಿ ತಣ್ಣೀರು ಹಾಕಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ ಶೃಂಗಸಭೆಯಲ್ಲಿ ನಾನು ವರ್ಚುಯಲ್‌ ಆಗಿ ಭಾಗವಹಿಸುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ

ಇದೇ ಅ.26 ರಿಂದ 28 ರವರೆಗೆ ಮಲೇಷ್ಯಾದ ಕೌಲಾಲಂಪುರದಲ್ಲಿ ಆಸಿಯಾನ್ ಶೃಂಗಸಭೆ ಆಯೋಜನೆಗೊಂಡಿದೆ. ಈ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ ನರೇಂದ್ರ ಮೋದಿ ಅವರೇ ಈಗ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ನಾನು ವರ್ಚುಯಲ್‌ ಆಗಿ ಈ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ಕಳೆದ ತಿಂಗಳು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ, ಮುಂಬರುವ ವಾರಗಳಲ್ಲಿ ಮೋದಿ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು. ಈ ಪೋಸ್ಟ್‌ನಿಂದ ಆಸಿಯಾನ್ ಶೃಂಗಸಭೆಯಲ್ಲಿ ಇಬ್ಬರು ನಾಯಕರು ಭೇಟಿಯಾಗಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.

ಪ್ರಧಾನಿ ಮೋದಿ ವಾರ್ಷಿಕ ಆಸಿಯಾನ್ ಶೃಂಗಸಭೆಯಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದಾರೆ. 2014 ರಿಂದ 2019 ರವರೆಗೆ ಪ್ರತಿ ವರ್ಷವೂ ಖುದ್ದಾಗಿ ಭಾಗವಹಿಸುತ್ತಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ 2020 ಮತ್ತು 2021 ರ ಸಭೆಯಲ್ಲಿ ವರ್ಚುಯಲ್‌ ಆಗಿ ಭಾಗವಹಿಸಿದ್ದರು. 2022 ರಲ್ಲಿ ನಡೆದ ಶೃಂಗಸಭೆಯಲ್ಲಿ ಮಾತ್ರ ಮೋದಿ ಭಾಗಿಯಾಗಿರಲಿಲ್ಲ.

ಆಸಿಯಾನ್ ರಾಷ್ಟ್ರಗಳ ಜೊತೆ ಮೋದಿ ಅವರಿಗೆ ಉತ್ತಮ ಸಂಬಂಧವಿದೆ. ಹೀಗಿದ್ದರೂ ಮೋದಿ ಈ ಬಾರಿ ಶೃಂಗದಲ್ಲಿ ಭಾಗವಹಿಸದೇ ಇರಲು ನಿಖರ ಕಾರಣ ತಿಳಿದು ಬಂದಿಲ್ಲ. ಆಪರೇಷನ್‌ ಸಿಂಧೂರದ ಬಳಿಕ ಮೋದಿ ಮತ್ತು ಟ್ರಂಪ್‌ ಜೊತೆಗಿನ ಸಂಬಂಧ ಉತ್ತಮವಾಗಿಲ್ಲ ಮತ್ತು ಇಲ್ಲಿಯವರೆಗೆ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿಲ್ಲ.

error: Content is protected !!