ಹೊಸದಿಗಂತ ಡಿಜಿಟಲ್ ಡೆಸ್ಕ್
ಟಾಲಿವುಡ್‌ನ ನಟ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಮತ್ತು ಸೊಸೆ ಶೋಭಿತಾ ಧೂಳಿಪಾಲ ದಂಪತಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ಫೆ. 7ರಂದು ನದೆಹಲಿಯಲ್ಲಿರುವ ಪಾರ್ಲಿಮೆಂಟ್ ಹೌಸ್‌ನಲ್ಲಿ ಭೇಟಿಯಾಗಿದ್ದರು. ಇವರ ಜತೆ ನಾಗಾರ್ಜುನ ಅವರ ಪತ್ನಿ ಅಮಲಾ ಅಕ್ಕಿನೇನಿ ಸಹ ಇದ್ದರು.
ಪ್ರಧಾನಿ ಮೋದಿ ಅವರನ್ನು ಅಕ್ಕಿನೇನಿ ಕುಟುಂಬ ಭೇಟಿಯಾದ ಸಂದರ್ಭ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಯರ್ಲಗಡ್ಡ ಲಕ್ಷ್ಮೀ ಪ್ರಸಾದ್ ಅವರು, ನಾಗಾರ್ಜುನ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಬಗ್ಗೆ ಬರೆದಿರುವ ʼಅಕ್ಕಿನೇನಿ ಕಾ ವಿರಾಟ್ ವ್ಯಕ್ತಿತ್ವʼ ಎಂಬ ಪುಸ್ತಕವನ್ನು ಪ್ರಧಾನಿ ಮೋದಿ ಅವರಿಗೆ ನೀಡಲಾಯಿತು.
ನವ ವಧು, ಅಕ್ಕಿನೇನಿ ಕುಟುಂಬದ ಸೊಸೆ ಶೋಭಿತಾ ಧೂಳಿಪಾಲ ಅವರು ಪ್ರಧಾನಿ ಮೋದಿ ಅವರಿಗೆ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ. ಆಂಧ್ರ ಪ್ರದೇಶದ ವಿಶೇಷ ಕಲಾಕೃತಿಯಾಗಿರುವ ಕೊಂಡಪಳ್ಳಿ ಬೊಮ್ಮಲು (ನರ್ತಿಸುವ ಗೊಂಬೆಗಳು) ಅನ್ನು ಕೊಡುಗೆಯಾಗಿ ಹಸ್ತಾಂತರಿಸಿದ್ದಾರೆ.
ಶೋಭಿತಾ ಹಾಗೂ ನಾಗ ಚೈತನ್ಯ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಜಂಟಿಯಾಗಿ ಒಂದು ಫೊಟೋ ಶೇರ್ ಮಾಡಿದ್ದು, ಇದರಲ್ಲಿ ಅಕ್ಕಿನೇನಿ ಕುಟುಂಬ ಸದಸ್ಯರು ಪ್ರಧಾನಿ ಮೋದಿ ಅವರೊಂದಿಗೆ ಫೊಟೋಗೆ ಪೋಸ್ ನೀಡಿದ್ದಾರೆ.
ಈ ಪೋಸ್ಟ್ ಅನ್ನು ಶೇರ್ ಮಾಡುವ ಸಂದರ್ಭ ಶೋಭಿತಾ ಅವರು ಹೀಗೆ ಬರೆದುಕೊಂಡಿದ್ದಾರೆ. ‘ಪಾರ್ಲಿಮೆಂಟ್ ಹೌಸ್‌ನಲ್ಲಿ ತಮ್ಮ ಭೇಟಿಗೆ ಅವಕಾಶ ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಯರ್ಲಗಡ್ಡ ಲಕ್ಷ್ಮೀ ಪ್ರಸಾದ್ ಅವರು ಬರೆದಿರುವ ‘ಅಕ್ಕಿನೇನಿ ಕಾ ವಿರಾಟ್ ವ್ಯಕ್ತಿತ್ವ’ ಪುಸ್ತಕವನ್ನು ಅವರಿಗೆ ನೀಡಲು ಹೆಮ್ಮೆ ಎನಿಸುತ್ತಿದೆ. ಇದು ಎ.ಎನ್.ಆರ್ ಗಾರು ಅವರ ಚಿತ್ರ ಪಯಣದ ನೆನಪಿಗಾಗಿ ಬರೆದಿರುವ ಪುಸ್ತಕ ಇದಾಗಿದೆ. ನೀವು ಅವರ ಕೆಲಸಗಳನ್ನು ಗುರುತಿಸಿ ಗೌರವಿಸಿರುವುದು ನಮಗೆ, ಅಕ್ಕಿನೇನಿ ಕುಟುಂಬಕ್ಕೆ ಹಾಗೂ ಚಿತ್ರಪ್ರೇಮಿಗಳಿಗೆಲ್ಲ ಸಂತಸ ಮತ್ತು ಹೆಮ್ಮೆಯ ವಿಚಾರ’ʼ ಎಂದು ಬರೆದುಕೊಂಡಿದ್ದಾರೆ.
‘ʼಕೊಂಡಪಳ್ಳಿ ಬೊಮ್ಮಲು (ನರ್ತಿಸುವ ಗೊಂಬೆಗಳು) ನನ್ನ ಜೀವನದಲ್ಲಿ ಎಂತಹ ಸವಿ ನೆನಪುಗಳನ್ನು ಹೊಂದಿದೆ ಎಂದು ಯಾರಿಗಾದರೂ ಗೊತ್ತಿದೆಯೇ? ಈ ಸವಿ ನೆನಪುಗಳು ನನ್ನನ್ನು ನನ್ನ ಬಾಲ್ಯ ಕಾಲಕ್ಕೆ ಕರೆದೊಯ್ಯುತ್ತದೆ. ತೆನಾಲಿಯಲ್ಲಿದ್ದ ನನ್ನ ಅಜ್ಜಿ-ತಾತನ ಮನೆಗೆ ಇದು ನನ್ನ ನೆನಪುಗಳನ್ನು ಒಯ್ಯುತ್ತದೆ’ ಎಂದು ನಟಿ ಭಾವುಕರಾಗಿ ಬರೆದುಕೊಂಡಿದ್ದಾರೆ.
‘ಇಂತಹ ಸವಿ ನೆನಪನ್ನು ಹೊಂದಿರುವ ಕೊಂಡಪಳ್ಳಿ ಬೊಮ್ಮಲು ವನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಲು ತುಂಬಾ ಸಂತೋಷವಾಗುತ್ತಿದೆ. ಇನ್ನೂ ಖುಷಿಯ ವಿಚಾರವೆಂದರೆ, ಪ್ರಧಾನಿಯವರಿಗೆ ಈ ಗೊಂಬೆಗಳ ಬಗ್ಗೆ ಮತ್ತು ಇದರ ಇತಿಹಾಸದ ಬಗ್ಗೆಯೂ ಗೊತ್ತಿದೆ ಎಂಬುದನ್ನು ತಿಳಿದು ನಮಗೆ ಇನ್ನಷ್ಟು ಖುಷಿ ಮತ್ತು ಆಶ್ಚರ್ಯವಾಯಿತು’ ಎಂದು ಶೋಭಿತಾ ಅವರು ತಮ್ಮ ಬರಹವನ್ನು ಮುಕ್ತಾಯಗೊಳಿಸಿದ್ದಾರೆ.