ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಖ್ಯಾತ ಒಟಿಟಿ ಸಂಸ್ಥೆ ಅಮೆಜಾನ್ ಪ್ರೈಮ್ ವಿಡಿಯೋ ಆಸ್ಟ್ರೇಲಿಯಾದಲ್ಲಿ ಹೊಸದೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಂದಾದಾರಿಕೆ ಪಡೆದ ಗ್ರಾಹಕರ ಖಾತೆಗಳಿಗೂ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವ ಕಂಪನಿಯ ಧೋರಣೆಯ ವಿರುದ್ಧ ಅಲ್ಲಿನ ಸ್ಪರ್ಧಾತ್ಮಕ ನಿಯಂತ್ರಣ ಮಂಡಳಿಯು (ACCC) ಫೆಡರಲ್ ಕೋರ್ಟ್ ಮೆಟ್ಟಿಲೇರಿದೆ.
ಗ್ರಾಹಕರ ದಾರಿ ತಪ್ಪಿಸಿದ ಆರೋಪ
ಗ್ರಾಹಕರು ಮೊದಲೇ ಹಣ ಪಾವತಿಸಿ ಜಾಹೀರಾತು ರಹಿತ ಸೇವೆ ಪಡೆದಿದ್ದರೂ, ಸೂಕ್ತ ಮಾಹಿತಿ ನೀಡದೆ ಜಾಹೀರಾತುಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಮಂಡಳಿ ಆರೋಪಿಸಿದೆ. ಈಗ ಜಾಹೀರಾತು ಮುಕ್ತ ಸೇವೆ ಬೇಕಿದ್ದರೆ ಗ್ರಾಹಕರು ಮತ್ತಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಇದು ಗ್ರಾಹಕರನ್ನು ತಪ್ಪು ದಾರಿಗೆಳೆಯುವ ತಂತ್ರ ಎಂದು ವಾದಿಸಲಾಗಿದೆ. ಆದರೆ, ಅಮೆಜಾನ್ ಈ ಆರೋಪವನ್ನು ನಿರಾಕರಿಸಿದ್ದು, ಮೊದಲೇ ಇಮೇಲ್ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ಕೋರ್ಟ್‌ನಲ್ಲಿ ಹೋರಾಡಲು ಸಜ್ಜಾಗಿದೆ.
ಭಾರತದಲ್ಲೂ ಶುರುವಾಗಿದೆ ಗ್ರಾಹಕರ ಆಕ್ರೋಶ!
ಈ ಕಾನೂನು ಹೋರಾಟವು ಜಾಗತಿಕ ಡಿಜಿಟಲ್ ಸ್ಟ್ರೀಮಿಂಗ್ ಸೇವೆಗಳಿಗೆ ದೊಡ್ಡ ಪರೀಕ್ಷೆಯಾಗಿದೆ. ಒಂದು ವೇಳೆ ಅಮೆಜಾನ್‌ಗೆ ಹಿನ್ನಡೆಯಾದರೆ, ಭವಿಷ್ಯದಲ್ಲಿ ಪ್ಲಾನ್‌ಗಳನ್ನು ಬದಲಾಯಿಸುವಾಗ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಇದೇ ರೀತಿಯ ಜಾಹೀರಾತು ಕಾಟ ಭಾರತದಲ್ಲೂ ಸಿನಿರಸಿಕರ ನಿದ್ದೆಗೆಡಿಸಿದೆ. ಭಾರೀ ಮೊತ್ತದ ಚಂದಾದಾರಿಕೆ ಹಣ ಪಡೆದೂ, ಸಿನಿಮಾಗಳ ಮಧ್ಯೆ ಜಾಹೀರಾತು ಪ್ರದರ್ಶಿಸುತ್ತಿರುವ ಒಟಿಟಿ ಸಂಸ್ಥೆಗಳ ವಿರುದ್ಧ ಭಾರತೀಯ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತದಲ್ಲೂ ಇಂತಹ ಸಂಸ್ಥೆಗಳ ವಿರುದ್ಧ ಕಾನೂನು ಹೋರಾಟದ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ.



