ದಿಗಂತ ವರದಿ ಪುತ್ತೂರು:
ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಅವರು ಸೋಮವಾರ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಪದವೀಧರ ಕ್ಷೇತ್ರದ ಚುನಾವಣೆಗೆ ಚುನಾವಣಾ ವೀಕ್ಷಕರಾಗಿರುವ ಅವರು, ಚುನಾವಣಾ ಪ್ರಕ್ರಿಯೆ ವೀಕ್ಷಣೆಗೆ ಆಗಮಿಸಿದ ಸಂದರ್ಭ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು.
ಈ ಸಂದರ್ಭ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದರಿಂದ, ಸ್ಕ್ಯಾನ್ ಆ್ಯಂಡ್ ಶೇರ್ ವ್ಯವಸ್ಥೆ ಜಾರಿಗೆ ಸೂಚಿಸಿದರು. ರೋಗಿಗಳು ಸ್ಕ್ಯಾನ್ ಮಾಡಿ ಟೋಕನ್ ವ್ಯವಸ್ಥೆ ಪಡೆದುಕೊಳ್ಳಬಹುದು. ಇದರಿಂದ ಆಸ್ಪತ್ರೆಯಲ್ಲಿ ಬಂದು ವೃಥಾ ಕಾಯುವ ಪರಿಸ್ಥಿತಿ ತಪ್ಪಲಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎನ್ನುವುದನ್ನು ಅವರ ಗಮನಕ್ಕೆ ತರಲಾಯಿತು.
ಅವರು ಆಸ್ಪತ್ರೆ, ಓಪಿಡಿ, ವೈದ್ಯಕೀಯ ಕೊಠಡಿ, ಡಯಲಿಸೀಸ್ ಕೇಂದ್ರಗಳಿಗೆ ಭೇಟಿ ನೀಡಿದರು. ಸಹಾಯಕ ಆಯುಕ್ತ ಮೊಬಿನ್ ಮೊಹಪಾತ್ರ, ತಹಸೀಲ್ದಾರ್ ಕುಂಞಿ ಅಹಮ್ಮದ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಆಶಾ ಪುತ್ತೂರಾಯ ಮತ್ತಿತರರು ಉಪಸ್ಥಿತರಿದ್ದರು.