ಹೊಸದಿಗಂತ ವರದಿ ಚಿತ್ರದುರ್ಗ:
ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಶೂನ್ಯ ಮಟ್ಟಕ್ಕೆ ತರುವುದು ನಮ್ಮ ಆದ್ಯತೆಯಾಗಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಎಎನ್‍ಎಂಗಳು ಗರ್ಭಿಣಿಯರು ಮತ್ತು ಬಾಣಂತಿಯರ ಆರೈಕೆಯಲ್ಲಿ ಕಣ್ಗಾವಲಾಗಿ ಕೆಲಸ ಮಾಡಬೇಕು ಎಂದು ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ನಿರ್ದೇಶನ ನೀಡಿದರು.
ತಾಯಿ ಮರಣ ಪ್ರಮಾಣವನ್ನು ಸಂಪೂರ್ಣ ಶೂನ್ಯಕ್ಕೆ ತರಲು ಶ್ರಮಿಸಬೇಕು
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜಿಲ್ಲಾ ಆರೋಗ್ಯ ಅಭಿಯಾನ’ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಯಿ ಮರಣ ಎಂಬುದು ಅತ್ಯಂತ ದುರಂತ ಸಂಗತಿ. ಮಗುವನ್ನು ಜಗತ್ತಿಗೆ ತಂದ ತಾಯಿಯೇ ಇಲ್ಲವಾಗುವುದು ಕುಟುಂಬಕ್ಕೆ ತುಂಬಲಾರದ ನಷ್ಟ. ತಾಯಿ ಮರಣ ಪ್ರಮಾಣವನ್ನು ಸಂಪೂರ್ಣ ಶೂನ್ಯಕ್ಕೆ ತರಲು ನಾವು ಶ್ರಮಿಸಬೇಕು. ಯಾವುದೇ ಕಾರಣಕ್ಕೂ ವೈದ್ಯಕೀಯ ನಿರ್ಲಕ್ಷ್ಯ ವಹಿಸಬಾರದು. ಗರ್ಭಾವಸ್ಥೆಯ ಆರಂಭಿಕ ಹಂತದಿಂದಲೇ ಸರಿಯಾದ ತಪಾಸಣೆ, ಪೌಷ್ಠಿಕ ಆಹಾರ ಸಲಹೆ ಹಾಗೂ ಬೆಂಬಲ ಒದಗಿಸುವ ಮೂಲಕ ನಿರಂತರ ಫಾಲೋ-ಅಪ್ ಮಾಡಬೇಕು ಎಂದು ಸೂಚಿಸಿದರು.
ಸಿಬ್ಬಂದಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು
ವಿಶೇಷವಾಗಿ ಗ್ರಾಮೀಣ ಭಾಗ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಸೌಲಭ್ಯ ವಂಚಿತ ಕುಟುಂಬಗಳಲ್ಲಿ ಶಿಕ್ಷಣದ ಅರಿವಿನ ಕೊರತೆ ಹಾಗೂ ದಾಖಲಾತಿಗಳ ಸಮಸ್ಯೆಗಳಿರುತ್ತವೆ. ಇಂತಹ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಸೂಕ್ತ ಮಾರ್ಗದರ್ಶನ ನೀಡಬೇಕು. ಸೂಕ್ತ ದಾಖಲಾತಿ ಮತ್ತು ಕಾರ್ಡ್‍ಗಳನ್ನು ಮಾಡಿಸಿಕೊಟ್ಟು, ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,105 ಹೆರಿಗೆಗಳಾಗಿದ್ದು, 4,090 ಸಜೀವ ಜನನಗಳು ದಾಖಲಾಗಿವೆ. ಇದರಲ್ಲಿ 31 ಶಿಶು ಮರಣ ಹಾಗೂ ಜುಲೈ ಅಂತ್ಯದವರೆಗೆ 3 ಮಾತೃ ಮರಣಗಳು ವರದಿಯಾಗಿವೆ ಎಂದು ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ ಸಭೆಗೆ ಮಾಹಿತಿ ನೀಡಿದರು.
ಆ.10ರಂದು ಜಂತುಹುಳು ನಿವಾರಣಾ ದಿನ:
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಆ.10 ರಂದು 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಷ್ಟೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 3,99,069 ಮಕ್ಕಳ ಗುರಿ ನಿಗಧಿಪಡಿಸಲಾಗಿದ್ದು, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೈಗಳ ಸ್ವಚ್ಛತೆ ಕಾಪಾಡಿಕೊಂಡು ಮಕ್ಕಳಿಗೆ ಮಾಹಿತಿ ನೀಡಬೇಕು. ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯವರ ನೇರ ನಿಗಾವಣೆಯಲ್ಲಿಯೇ ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ:
ಆಗಸ್ಟ್ 10 ರಂದು ಯಾವುದೇ ಕಾರಣಕ್ಕೂ ಮಗು ಜಂತುಹುಳು ಮಾತ್ರೆಯಿಂದ ವಂಚಿತರಾಗಬಾರದು. ಒಂದು ವೇಳೆ ಅಂದು ಶಾಲೆಗೆ ಗೈರುಹಾಜರಾದ ಅಥವಾ ಮಾತ್ರೆ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ಆಗಸ್ಟ್ 17 ರಂದು ನಡೆಯುವ ‘ಮಾಪ್ ಅಪ್’ ದಿನದಂದು ಕಡ್ಡಾಯವಾಗಿ ಮಾತ್ರೆ ನುಂಗಿಸಬೇಕು. ಆ ಮೂಲಕ ಮಕ್ಕಳಲ್ಲಿ ರಕ್ತಹೀನತೆ ಉಂಟಾಗದಂತೆ ಸೂಕ್ತ ಜಾಗ್ರತೆ ಮತ್ತು ನಿಗಾ ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ಸುಧಾಕರ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಅಭಿನವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.



