ದಿಗಂತ ವರದಿ ಮಂಡ್ಯ:
ವಿಶ್ವವಿಖ್ಯಾತ ಕೃಷ್ಣರಾಜ ಸಾಗರದ ಬೃಂದಾವನಕ್ಕೆ ಹೊಸ ರೂಪ ನೀಡಲು ನೀರಾವರಿ ಇಲಾಖೆ ಕಾರ್ಯೋನ್ಮುಖವಾಗಿದ್ದು, ಸಂಪುಟ ಸಭೆಯ ಒಪ್ಪಿಗೆ ನಂತರ ಖಾಸಗಿ ಸಹಭಾಗಿತ್ವದಲ್ಲಿ ಕಾವೇರಿ ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗುವುದಾಗಿ ಜಲಸಂಪನ್ಮೂಲ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ರೈತರ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯ ಪರಿವೀಕ್ಷಣೆ ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನಮ್ಮ ‘ಬ್ರಾಂಡ್ ನೇಮ್’. ಅದನ್ನು ಉಳಿಸಿಕೊಂಡು ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಆದ್ಯತೆ ನೀಡಿ ಸುಮಾರು 10 ಸಾವಿರ ಪ್ರವಾಸಿಗರಿಗೆ ಅಗತ್ಯವಿರುವ ಮನರಂಜನೆ, ವಸತಿ, ಪಾರ್ಕಿಂಗ್ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು ಎಂಟತ್ತು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.
ಕನ್ನಂಬಾಡಿ ಅಣೆಕಟ್ಟೆ ಹಾಗೂ ಕಾವೇರಿ ಬೃಂದಾವನವು ರಾಜಧಾನಿ ಬೆಂಗಳೂರಿನಿಂದ ಸುಮಾರು 150 ಕಿ.ಮೀ. ದೂರವಿದ್ದು, ಕೇವಲ ಒಂದೂವರೆ ಗಂಟೆಗಳ ಪ್ರಯಾಣದಲ್ಲಿ ತಲುಪಬಹುದಾಗಿದ್ದು, ಕೆ.ಆರ್.ಎಸ್., ರಂಗನತಿಟ್ಟು, ಮೈಸೂರು ಹಾಗೂ ನೆರೆಯ ಊಟಿ ಸೇರಿದಂತೆ ಹಲವಾರು ಪ್ರವಾಸೋದ್ಯಮ ಸ್ಥಳಗಳನ್ನು ಸಂಪರ್ಕಿಸುವ ಕೇಂದ್ರ ಸ್ಥಾನವಾಗಿ ಹೊರಹೊಮ್ಮಲಿದೆ ಎಂದು ವಿವರಿಸಿದರು.