ಹೊಸದಿಗಂತ ವರದಿ ಯಲ್ಲಾಪುರ :
ತಾಲೂಕಿನ ಮಂಚಿಕೇರಿ ಸೇತುವೆಯ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಕೆಎ:14, ಸಿ: 4610 ನೋಂದಣಿ ಸಂಖ್ಯೆಯ ಖಾಸಗಿ ಬಸ್ಸೊಂದು ಶಿವಮೊಗ್ಗದಿಂದ ದಾಂಡೇಲಿಯ ರೆಸಾರ್ಟ್ ಒಂದಕ್ಕೆ ಬರುತ್ತಿತ್ತು ಎನ್ನಲಾಗಿದೆ. ಹೀಗೆ ಬರುತ್ತಿರುವಾಗ ಶಿರಸಿ – ಯಲ್ಲಾಪುರ ರಸ್ತೆಯಲ್ಲಿ ಬರುವ ಮಂಚಿಕೇರಿ ಸೇತುವೆಯ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಬಸ್ಸಿನಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಿದ್ದು, 39 ಪ್ರಯಾಣಿಕರು ಇದ್ದರೆನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯಿಂದ ಬಸ್ಸಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.