ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಬ್ರೇಕ್ ಹಾಕಲು ದೆಹಲಿ ಸರ್ಕಾರ ಮುಂದಾಗಿದೆ. ಶಾಲಾ ಶಿಕ್ಷಣ ಮಸೂದೆ 2025ನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ಶುಲ್ಕ ಹೆಚ್ಚಳಕ್ಕೆ ಸರ್ಕಾರದ ಒಪ್ಪಿಗೆ ಕಡ್ಡಾಯವಾಗಿದೆ.
ನಾಲ್ಕು ಗಂಟೆಗಳ ಚರ್ಚೆಯ ಬಳಿಕ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ವೇಳೆ ಎಎಪಿಯಿಂದ ಬಂದ ಎಂಟು ತಿದ್ದುಪಡಿಗಳ ಸಲಹೆಯನ್ನು ತಿರಸ್ಕರಿಸಲಾಗಿದೆ.
ಈ ಮಸೂದೆಯಿಂದ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಬೀಳಲಿದೆ. ಇದು ಪೋಷಕರಿಗೆ ಹೊರೆಯನ್ನು ಕಡಿಮೆ ಮಾಡಲಿದೆ. ಇನ್ನುಮುಂದೆ ಸರ್ಕಾರದ ಅನುಮತಿಯಿಲ್ಲದೇ ಯಾವುದೇ ಶಾಲೆ ಶುಲ್ಕವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಆಶಿಶ್ ಸೂದ್ ಹೇಳಿದ್ದಾರೆ.
ಈ ಹಿಂದೆ ಸರ್ಕಾರದಿಂದ ಹಂಚಿಕೆಯಾದ ಭೂಮಿಯಲ್ಲಿ ನಿರ್ಮಾಣಗೊಂಡ ಸುಮಾರು 350 ಶಾಲೆಗಳು ಮಾತ್ರ ಶುಲ್ಕ ಪರಿಷ್ಕರಣೆಗೆ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಈಗ ನಗರದ ಎಲ್ಲಾ 1,443 ಖಾಸಗಿ ಅನುದಾನರಹಿತ ಶಾಲೆಗಳಿಗೂ ಈ ನಿಯಮಗಳು ಅನ್ವಯವಾಗುತ್ತದೆ. ಆ ಶಾಲೆ ಸರ್ಕಾರಿ ಭೂಮಿಯಲ್ಲಿರಲಿ ಅಥವಾ ಇಲ್ಲದಿರಲಿ ಅದು ಈ ನಿಯಮಕ್ಕೆ ಒಳಪಡುತ್ತದೆ ಎಂದು ಅವರು ತಿಳಿಸಿದ್ದಾರೆ.