ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಬಸ್ಗಳಿಗೂ ಶಕ್ತಿ ಯೋಜನೆ ವಿಸ್ತರಣೆ ಆಗಬೇಕು, ಇಲ್ಲವಾದರೆ ರಸ್ತೆ ತೆರಿಗೆ ರದ್ದು ಮಾಡಬೇಕು, ರ್ಯಾಪಿಡೋ ನಿಲ್ಲಿಸಬೇಕು ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಇಂದು ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸಾರಿಗೆ ಬಂದ್ ನಡೆಸುತ್ತಿದೆ, ಇದರಿಂದಾಗಿ ಬಿಎಂಟಿಸಿ ಬಸ್ಗೆ ಕೆಲಸದ ಹೊರೆ ಹೆಚ್ಚಾಗಿದೆ.
ಭಾನುವಾರ ರಾತ್ರಿ 12 ರಿಂದ ಸೋಮವಾರ ರಾತ್ರಿ 12ರವರೆಗೆ ಬಂದ್ ನಡೆಯಲಿದ್ದು, ಬಿಎಂಟಿಸಿ ಬಸ್ ಹೆಚ್ಚುವರಿಯಾಗಿ ನಾಲ್ಕು ಸಾವಿರ ಟ್ರಿಪ್ ಸಂಚರಿಸಲಿವೆ. ಖಾಸಗಿ ಬಸ್ ಓಡಾಟ ಇಲ್ಲದೇ ಇರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಬಿಎಂಟಿಸಿ ಬಸ್ಗಳು ಹೆಚ್ಚುವರಿ ಸಂಚಾರ ನಡೆಸಲಿವೆ.
ಅಗತ್ಯ ಬಿದ್ದರೆ ಇನ್ನಷ್ಟು ಟ್ರಿಪ್ ಹೆಚ್ಚು ಮಾಡಲಾಗುವುದು, ಈಗಾಗಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಸ್ಗಳು 100 ಟ್ರಿಪ್ ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾರಿಗೆ ಒಕ್ಕೂಟದ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ, ನಮ್ಮ ಸರ್ಕಾರ ಬಂದಮೇಲೆ ವಾಹನ ತೆರಿಗೆ ಹೆಚ್ಚಳ ಮಾಡಿಲ್ಲ. ಖಾಸಗಿ ವಾಹನಗಳ ಮಾಲೀಕರ ಡಿಮ್ಯಾಂಡ್ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.