ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶ ರಾಜ್ಯದತ್ತ ಮುಖ ಮಾಡಿದೆ. ಇನ್ನು ಕೆಲವೇ ತಿಂಗಳಲ್ಲಿ ಆ ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಮಲ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ತನ್ನ ಅಸ್ತ್ರಗಳನ್ನು ಸಿದ್ಧಪಡಿಸುತ್ತಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜ್ಯದತ್ತ ವಿಶೇಷ ಗಮನ ಹರಿಸಿದಂತಿದೆ. ಸೋಮವಾರ ಮಧ್ಯಪ್ರದೇಶಕ್ಕೆ ಭೇಟಿ ನೀಡಿ ಕಮಲ್ ನಾಥ್ ಮತ್ತು ಇತರ ಪಕ್ಷದ ನಾಯಕರೊಂದಿಗೆ ಜಬಲ್ಪುರದ ನರ್ಮದಾ ನದಿಯಲ್ಲಿ ಪೂಜೆ ಸಲ್ಲಿಸಿದರು.
ನರ್ಮದಾ ನದಿಯನ್ನು ಮಧ್ಯಪ್ರದೇಶದ ಜೀವನಾಡಿ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಗೌರಿಘಾಟ್‌ನಲ್ಲಿ ನರ್ಮದಾ ನದಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಚಾರ್ಯ ಓಂಕಾರ್ ದುಬೆ ನೇತೃತ್ವದ 101 ಬ್ರಾಹ್ಮಣರ ಮಂತ್ರಘೋಷದ ನಡುವೆ ಪ್ರಿಯಾಂಕಾ ಅವರು ನರ್ಮದಾ ಪೂಜೆ ಮತ್ತು ಆರತಿ ನೆರವೇರಿಸಿದರು. ಮಧ್ಯಪ್ರದೇಶದ ಜೀವನಾಡಿ ಎನಿಸಿರುವ ನರ್ಮದಾ ನದಿಯನ್ನು ಸ್ವಚ್ಛವಾಗಿಡಲು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ. ಇದಕ್ಕೂ ಮುನ್ನ ಸ್ಥಳೀಯ ಶಾಸಕ ತರುಣ್ ಭಾನೋಟ್ ಅವರು ಪ್ರಿಯಾಂಕಾ ಗಾಂಧಿ ಅವರಿಗೆ ವಿನಾಯಕನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು.
ಕೆಲವೇ ತಿಂಗಳುಗಳಲ್ಲಿ ಈ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಿಯಾಂಕಾ ಬಜಾಲ್‌ಪುರದಿಂದ ವಿಜಯ್ ಸಂಕಲ್ಪ್ ಪರ ಪ್ರಚಾರ ಆರಂಭಿಸಿದರು. ಬಳಿಕ ಅಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ನರ್ಮದಾ ನದಿಗೆ ಪೂಜೆ ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.