ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ಗಳಿಕೆ ಪ್ರಕರಣದ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಇದೇ ಮೊದಲ ಬಾರಿಗೆ ತನ್ನ ದೋಷಾರೋಪಪಟ್ಟಿಯಲ್ಲಿ ಪ್ರಿಯಾಂಕಾ ವಾದ್ರಾರನ್ನು ಹೆಸರಿಸಿದೆ.
ಇದಕ್ಕೂ ಮೊದಲಿನ ದೋಷಾರೋಪಪಟ್ಟಿಯಲ್ಲಿ ವಾದ್ರಾರ ಉದ್ಯಮ ಸಹವರ್ತಿ ಸಿಸಿ ಥಂಪಿಯನ್ನು ಹೆಸರಿಸಲಾಗಿತ್ತಾದರೂ, ನೇರವಾಗಿ ಸೋನಿಯಾ ಪುತ್ರಿಯ ಹೆಸರು ಉಲ್ಲೇಖಿಸಿರುವುದು ಇದೇ ಮೊದಲು.
ಪ್ರಕರಣದ ವಿವರ:
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಹಾಗೂ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿ ಮೂಲದ ರಿಯಲ್ ಎಸ್ಟೇಟ್ ದಲ್ಲಾಳಿ ಮೂಲಕ ಹರಿಯಾಣದಲ್ಲಿ ಭೂಮಿಯನ್ನು ಖರೀದಿಸಿದ್ದಾರೆ. ಕೆಲವರ್ಷಗಳ ನಂತರ ಆ ಭೂಮಿಯನ್ನು ಯಾರಿಂದ ಕೊಂಡಿದ್ದರೋ ಅವರಿಗೇ ಹೆಚ್ಚಿನ ಬೆಲೆಗೆ ಮಾರಿದ್ದಾರೆ ಎಂಬುದನ್ನು ಜಾರಿ ನಿರ್ದೇಶನಾಲಯದ ದೋಷಾರೋಪಪಟ್ಟಿ ಹೇಳುತ್ತಿದೆ.
2006ರಲ್ಲಿ ಹರಿಯಾಣದ ಫರಿದಾಬಾದ್‌ನಲ್ಲಿ 40 ಕನಾಲ್( ಐದು ಎಕರೆ) ಕೃಷಿ ಭೂಮಿಯನ್ನು ಖರೀದಿಸಿದ್ದ ಪ್ರಿಯಾಂಕಾ ವಾದ್ರಾ. ನಂತರ 2010ರಲ್ಲಿ ಅದೇ ಭೂಮಿಯನ್ನು ತಿರುಗಿ ಎಚ್ ಎಲ್ ಪಾಹ್ವ ಎಂಬ ಅದೇ ದಲ್ಲಾಳಿಗೆ ಮಾರಿದ್ದಾರೆ. ವಾದ್ರಾ ಮತ್ತು ಸಿಸಿ ಥಂಪಿ ಇಬ್ಬರೂ ಇದೇ ದಲ್ಲಾಳಿ ಮೂಲಕ ಭೂ ವ್ಯವಹಾರಗಳನ್ನು ಮಾಡಿದ್ದಾರೆ. ಪ್ರಿಯಾಂಕಾ ವಾಧ್ರಾ ಮತ್ತು ಸಿಸಿ ಥಂಪಿ ನಡುವೆ ವ್ಯವಹಾರಿಕ ಮತ್ತು ವೈಯಕ್ತಿಕ ನೆಲೆಗಳಲ್ಲಿ ಗಾಢ ಸಂಬಂಧವಿದೆ ಎಂಬುದು ಜಾರಿ ನಿರ್ದೇಶನಾಲಯದ ತನಿಖೆಯ ಸಾರ.