ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಈ ಕುರಿತು ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಘಟನೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಆರ್ ಅಶೋಕ್, ‘ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆ ನಾಚಿಕೆ ಇಲ್ಲ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯಪಾಲರು ಕಾಂಗ್ರೆಸ್ ಸರ್ಕಾರವನ್ನು ಕೂಡಲೇ ವಜಾ ಮಾಡಲಿ, ಈ ಪಾಕ್ ಪರ ಘೋಷಣೆ ಕೂಗಿರುವ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ, ‘ಕಾಂಗ್ರೆಸ್‌ನ 3 ಅಭ್ಯರ್ಥಿಗಳು ಗೆದ್ದ ಬಳಿಕ ಪಾಕ್ ಪರ ಘೋಷಣೆ ಕೂಗಿದ್ದಾರೆ. ಇದು ಮಹಾ ಅಪರಾಧ. ಪಾಕಿಸ್ತಾನ ಹುಟ್ಟಿದ್ದೇ ಭಾರತದ ಮೇಲೆ ದ್ವೇಷ ಮತ್ತು ಹಿಂದೂಗಳ ಮಾರಣ ಹೋಮದಿಂದ. ಕಾಲು ಕೆರೆದು ಪಾಕ್ 1948, 1965, 1973ರಲ್ಲಿ ದಾಳಿ ಮಾಡಿತ್ತು. ಇಂತಹ ಪಾಕಿಸ್ತಾನ ಪರ ಘೋಷಣೆ ಕೂಗಿದ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಕಿಡಿಕಾರಿದರು.
ಪಾಕಿಸ್ತಾನ ಪರ ಘೋಷಣೆ: ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ
ವಿಧಾನಸೌಧದ ಲಾಂಜ್ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹಿನ್ನಲೆ ವಿಧಾನಸೌಧ ಪೊಲೀಸ್ ಠಾಣೆಗೆ ಪ್ರತಿಪಕ್ಷ ಬಿಜೆಪಿ ದೂರು ಸಲ್ಲಿಸಿದ್ದು, ಠಾಣೆ ಎದುರೆ ಬಿಜೆಪಿ ಶಾಸಕರ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪೂಂಜ, ಜ್ಯೋತಿ ಗಣೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.