ಹೊಸದಿಗಂತ ವರದಿ,ಮಡಿಕೇರಿ:
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಟ್ರೈಲರ್ ಮಾತ್ರ ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲೆ ಗುಂಬಜ್, ಅದರ ಮೇಲೊಂದು ಧ್ವನಿವರ್ಧಕ ಬಂದು ಆಜಾನ್ ಕೇಳಿ ಬರಲಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ವೀರಾಜಪೇಟೆಯಲ್ಲಿ ಗುರುವಾರ ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಓಟು ಹಾಕಿದ್ರೆ ತಾಲಿಬಾನ್ ಸರ್ಕಾರ ಬರುತ್ತೆ. ಅದು ಕನ್ನಡಿಗರ ಸರ್ಕಾರವಾಗುವ ಬದಲು ತಾಲಿಬಾನ್ ಸರ್ಕಾರ ಆಗಿರುತ್ತೆ ಎಂದು ನಾನು ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆ. ಈಗ ನನ್ನ ಮಾತು ನಿಜವಾಗಿದೆ. ಮೊನ್ನೆ ವಿಧಾನಸೌಧದಲ್ಲಿ ಘೊಷಣೆ ಕೂಗಿರುವುದು ಕೇವಲ ಟ್ರೈಲರ್ ಅಷ್ಟೆ. ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲಿರುವ ಗೋಪುರ ಗುಂಬಜ್ ಆಗುತ್ತದೆ. ಅದರ ಮೇಲೆ ಒಂದು ಲೌಡ್ ಸ್ಪೀಕರ್ ಬಂದು ಆಜಾನ್ ಕೇಳುತ್ತದೆ. ಕಾಂಗ್ರೆಸ್ ಸರ್ಕಾರ ಮುಂದುವರಿಯಲು ಬಿಟ್ಟರೆ ತಾಲಿಬಾನ್ ಸರ್ಕಾರ ಮಾಡುವ ಎಲ್ಲಾ ಅನಾಚಾರಗಳನ್ನು ಮಾಡುತ್ತದೆ ಎಂದು ನುಡಿದರು.
ಇನ್ನೂ ರಾಜ್ಯಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷ ಸೋತಿರುವುದಕ್ಕೆ ಬಿಜೆಪಿ ಹೀಗೊಂದು ವಿವಾದ ಸೃಷ್ಟಿಸಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಶುದ್ಧ ಸುಳ್ಳು. ದೇಶದಲ್ಲೇ ರಾಜ್ಯಸಭೆಯಲ್ಲಿ ಬಿಜೆಪಿ ಮೆಜಾರಿಟಿ ಪಡೆದಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಮಾಧ್ಯಮಗಳು ಪ್ರಪಂಚಕ್ಕೆ ತೋರಿಸಿವೆ. ಘೋಷಣೆ ಕೂಗಿರುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿರುಗೇಟು ನೀಡಿದರು.