ಹೊಸದಿಗಂತ , ಹುಬ್ಬಳ್ಳಿ:
ಕಾಂಗ್ರೆಸ್ ರಾಜ್ಯಸಭಾ ವಿಜೇತ ಅಭ್ಯರ್ಥಿ ನಾಸೀರ್ ಹುಸೇನ್ ಅವರ ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾ ಬಾದ್ ಎಂಬ ಘೋಷಣೆ ಮಾಡಿರುವುದನ್ನು ಖಂಡಿಸಿ ನಾಸೀರ್ ಹುಸೇನ್ ರನ್ನು ಕಾಂಗ್ರೆಸ್ ನಿಂದ ವಜಾಗೊಳಿಸಲು ಆಗ್ರಹಿಸಿ ಬಿಜೆಪಿ ಹು-ಧಾ ಮಹಾನಗರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿಯ ಮಿನಿವಿಧಾನ ಸೌಧದ ಎದುರು ಸಮಾವೇಶಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಾಕಿಸ್ತಾನ ಪರ ಘೋಷಣೆ ಹಾಕುವ ಮೂಲಕ ಭಾರತ ಸಂವಿಧಾನದ ಘಟನತೆಗೆ ಹಾಗೂ ಭಾರತೀಯರಿಗೆ ಧಕ್ಕೆ ಹಾಗೂ ಮುಖಕ್ಕೆ ಮಸಿಬಳಿಯುವ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಖಂಡಿಸಿ ನೂತನ ಸಯ್ಯದ ನಾಸೀರ್ ಹುಸೇನ ಹಾಗೂ ಕಾಂಗ್ರೆಸ್ ಸರ್ಕಾರ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಹು-ಧಾ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಒಂದೆಡೆ ಭಾರತ ಸಂವಿಧಾನ ಜಾಗೃತಿ ಹಾಗೂ ಆಚರಣೆ ಮಾಡುತ್ತಿರುವ ಕಾಂಗ್ರೆಸ್ ಇನ್ನೊಂದೆಡೆ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದೆ. ಇದು ಕಾಂಗ್ರೆಸ್ ಅದೋಗತಿಗೆ ಸಾಕ್ಷಿಯಾಗಿದೆ ಎಂದು ಹರಿಹಾಯ್ದರು.
ಭಾರತದಲ್ಲಿ ವಾಸ, ಇಲ್ಲಿಯ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುವ ಇವರ ಮನಸ್ಥಿತಿ ಎಂಥಹದ್ದು ಎಂಬುವುದು ಜನರಿಗೆ ಗೊತ್ತಾಗುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಭ್ರಷ್ಟಾಚಾರ, ದೇಶ ವಿರೋಧಿ ಕೆಲಸ ಮಾಡುತ್ತಿರುವುದು ಖಂಡನೀಯ. ಇದರ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಹಾಗೂ ನೂತನ ರಾಜ್ಯ ಸಭಾ ಸದಸ್ಯ ಸಯ್ಯದ ನಾಸೀರ್ ಹುಸೇನ ರಾಜೀನಾಮೆ ನೀಡಬೇಕು. ಘೋಷಣೆ ಕೂಗಿದ ಅವರ ಬೆಂಬಲಿಗರ ಮೇಲೆ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕಲ್ಲನಗೌಡ ಪಾಟೀಲ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ದತ್ತಮೂರ್ತಿ ಕುಲಕರ್ಣಿ, ರಾಜು ಜರತಾರಘರ, ಮಹೇಂದ್ರ ಕೌತಾಳ, ಉಮೇಶ ದೂಶಿ, ಪಾಲಿಕೆ ಸದಸ್ಯೆ ಉಮಾ ಮುಕುಂದ, ಉಮೇಶ ಕೌಜಗೇರಿ, ಮೀನಾಕ್ಷಿ ವಂಟಮೂರಿ ಭಾಗಿಯಾಗಿದ್ದರು.