ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ವಿರುದ್ಧ ನಾನು ಯಾವುದೇ ಆರೋಪ ಮಾಡಿಲ್ಲ, ದೂರು ನೀಡಿಲ್ಲ ಎಂದು ನಿರ್ಮಾಪಕ ಕುಮಾರ್ ಯೂ ಟರ್ನ್ ಹೊಡೆದಿದ್ದಾರೆ.
ಹಣಕಾಸು ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನಿರ್ಮಾಪಕರ ಕುಮಾರ್ ವಿರುದ್ಧ ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದು, ಬೆಂಗಳೂರಿನ ಜೆಎಂಎಫ್ ಸಿ ಕೋರ್ಟ್ ಅರ್ಜಿ ಸ್ವೀಕರಿಸಿ ವಿಚಾರಣೆ ನಡೆಸಿದ್ದು, ಆಗಸ್ಟ್ 17 ಕ್ಕೆ ಮುಂದೂಡಿದೆ.
ಈ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನಿರ್ಮಾಪಕ ಕುಮಾರ್ ನು ಸುದೀಪ್ ವಿರುದ್ಧ ದೂರು ನೀಡಿಲ್ಲ, ಯಾವುದೇ ಆರೋಪ ಮಾಡಿಲ್ಲ ಎಂದಿದ್ದಾರೆ.
ನಾನು ನೀಡಿರುವುದು ದೂರು ಅಲ್ಲ ಅದು ಮನವಿಪತ್ರವಷ್ಟೇ, ಯಾವುದೇ ದೂರು ನೀಡಿಲ್ಲ, ಸಮಸ್ಯೆ ಬಗೆಹರಿಸಿಕೊಳ್ಳಲು ಸುದೀಪ್ ಅವರನ್ನು ಹುಡುಕಿಕೊಂಡು ಹೋದರೆ ಅವರು ಇಲ್ಲವೆಂದು ಹೇಳುತ್ತಿದ್ದರು. ಸುದೀಪ್ರ ಮ್ಯಾನೇಜರ್ ನನಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ, ಹಾಗಾಗಿ ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿಪತ್ರ ನೀಡಿದೆ ಎಂದು ಕುಮಾರ್ ಹೇಳಿದ್ದಾರೆ.
ಕೋರ್ಟ್ ನೋಟಿಸ್ ಬಂದರೆ ಫಿಲ್ಮ್ ಚೇಂಬರ್ಗೆ ತಂದು ಕೊಡುತ್ತೇನೆ, ವಾಣಿಜ್ಯ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹೇಳಿದಂತೆ ನಡೆಯುವೆ ಎಂದಿದ್ದಾರೆ.
ಇತ್ತ ಕೋರ್ಟ್ ಆವರಣದಲ್ಲಿ ಮಾತನಾಡಿದ ನಟ ಸುದೀಪ್ ‘ ಕಾನೂನು ವ್ಯಾಪ್ತಿಯಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ, ಕರ್ನಾಟಕ ವಾಣಿಜ್ಯ ಮಂಡಳಿ ನನಗೆ ತಾಯಿ ಸಮಾನ, ನನ್ನ ವಿರುದ್ಧದ ಆರೋಪಕ್ಕೆ ಲೀಗಲ್ ನೋಟಿಸ್ ಕೊಟ್ಟಿದ್ದೇನೆ. ಆದರೆ ಅವರು ಉತ್ತರ ಕೊಡಲಿಲ್ಲ. ಅದಕ್ಕೆ ಕೋರ್ಟ್ ಗೆ ಬಂದಿದ್ದೇನೆ ಎಂದರು. ಬಾಯಿ ಇದೆ ಎಂದು ಬೇಕಾಬಿಟ್ಟಿ ಮಾತನಾಡುವುದಲ್ಲ, ಎಲ್ಲಾ ಆರೋಪಗಳಿಗೂ ಕಾನೂನು ವ್ಯಾಪ್ತಿಯಲ್ಲಿ ತಕ್ಕ ಉತ್ತರ ನೀಡಲಿದ್ದೇನೆ ಎಂದರು.