ದೇಸಿ ಮ್ಯಾಪ್‌ ಕಂಪನಿಯ ಲಾಭದ ವಹಿವಾಟು !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಾಶ್ಚಾತ್ಯ ಗೂಗಲ್‌ ಮ್ಯಾಪ್ಸ್‌ ಗೆ ಪರ್ಯಾಯವಾಗಿ ತಲೆ ಎತ್ತಿರೋ ಸ್ವದೇಶಿ ಡಿಜಿಟಲ್‌ ಮ್ಯಾಪ್‌ ಕಂಪನಿ MapmyIndia ವು ತನ್ನ FY23 ರ Q1 ಗಾಗಿ ನಿವ್ವಳ ಲಾಭದಲ್ಲಿ 17.5 ಶೇಕಡಾ ಏರಿಕೆಯನ್ನು ವರದಿ ಮಾಡಿದೆ. ಅಲ್ಲದೇ ಅದರ ಉತ್ಪನ್ನ ಮತ್ತು ಕಂಪನಿಯ ಸೇವೆಗಳಿಗೆ ಹೆಚ್ಚಿದ ಬೇಡಿಕೆಯು ಕಂಪನಿಯ ಲಾಭಾಂಶ ಹೆಚ್ಚಾಗುವುದಕ್ಕೆ ಉತ್ತೇಜನ ನೀಡಿದೆ.

FY23 ರ ಮೊದಲ ತ್ರೈಮಾಸಿಕದಲ್ಲಿ 24.2 ಕೋಟಿ ರೂ. ನಿವ್ವಳ ಲಾಭವನ್ನು ಕಂಪನಿ ದಾಖಲಿಸಿದೆ. ಇದು ಕಳೆದ ವರ್ಷ ಇದೇ ಅವಧಿಗೆ ಲಾಭವು 20.6ಕೋಟಿ ರೂ. ಇತ್ತು. ಅಂದರೆ ಕಂಪನಿಯ ಲಾಭಾಂಶವು 33.9% ದಷ್ಟಿದೆ. ರೂ 65 ಕೋಟಿ ನಿವ್ವಳ ಆದಾಯವನ್ನು ಕಂಪನಿ ವರದಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 50.2% ದಷ್ಟು ಏರಿಕೆಯಾಗಿದೆ. ಈ ಕುರಿತು ಮ್ಯಾಪ್‌ ಮೈ ಇಂಡಿಯಾ ಸಿಇಒ ರೋಹನ್ ವರ್ಮಾ ಮಾತನಾಡಿ “ನಮ್ಮ ಆದಾಯವು ಮಾರುಕಟ್ಟೆಯ ವಿವಿಧ ಕ್ಷೇತ್ರಗಳಲ್ಲಿ ಏರಿಕೆಯಾಗಿದೆ. ಮಾರುಕಟ್ಟೆ ಭಾಗದಲ್ಲಿ A&M (ಆಟೋಮೋಟಿವ್ ಮತ್ತು ಮೊಬಿಲಿಟಿ ಟೆಕ್) ನಲ್ಲಿ 65% ಮತ್ತು C&E (ಗ್ರಾಹಕ ಟೆಕ್ ಮತ್ತು ಎಂಟರ್‌ಪ್ರೈಸ್ ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್) 37% ರಷ್ಟು ಏರಿಕೆಯಾಗಿದೆ. ಇನ್ನು ಉತ್ಪನ್ನಗಳ ಭಾಗದಲ್ಲಿ ನಕ್ಷೆ ಮತ್ತು ಡೇಟಾವು 53% ಮತ್ತು ಪ್ಲಾಟ್‌ಫಾರ್ಮ್ ಮತ್ತು IoT(ಇಂಟರ್‌ನೆಟ್‌ ಆಫ್‌ ಥಿಂಗ್ಸ್)‌ ವಿಚಾರದಲ್ಲಿ 47% ಹೆಚ್ಚಾಗಿದೆ” ಎಂದು ಉಲ್ಲೇಖಿಸಿದ್ದಾರೆ.

1995 ರಲ್ಲಿ ಸ್ಥಾಪನೆಯಾದ MapmyIndia ದ ಉತ್ಪನ್ನ ಮತ್ತು ಸೇವೆಗಳು ಇಕಾಮರ್ಸ್, ಆಟೋಮೋಟಿವ್, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಆಹಾರ ವಿತರಣೆ, ಆರೋಗ್ಯ ರಕ್ಷಣೆ ಇತ್ಯಾದಿಗಳನ್ನು ಒಳಗೊಂಡಂತೆ ಬಹು ವಲಯಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿವೆ. HDFC, Flipkart, Airtel, Hyundaiಮುಂತಾದ ದಿಗ್ಗಜ ಕಂಪನಿಗಳು MapmyIndia ದ ಗ್ರಾಹಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ “ಕಂಪನಿಯ ಉತ್ಪನ್ನ ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಿದ್ದು ಇದು 85% ಹೆಚ್ಚಾಗಿದೆ. ಭವಿಷ್ಯದಲ್ಲಿ ಆದಾಯವು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ” ಎಂದು MapmyIndia ನ ಮ್ಯಾನೇಜಿಂಗ್ ಡೈರೆಕ್ಟರ್ ರಾಕೇಶ್ ವರ್ಮಾ ಹೇಳುತ್ತಾರೆ.

ಕೆಲ ವರದಿಗಳ ಪ್ರಕಾರ MapmyIndia ದ ಮಾರುಕಟ್ಟೆ ಅವಕಾಶವು ಶತಕೋಟಿ ಡಾಲರ್‌ಗಳಿಗೆ ಸಾಗುತ್ತದೆ ಎನ್ನಲಾಗಿದೆ. ಭಾರತೀಯ ಡಿಜಿಟಲ್ ಮ್ಯಾಪಿಂಗ್ ಸೇವೆಗಳ ಮಾರುಕಟ್ಟೆಯು 2025 ರ ವೇಳೆಗೆ $4.2 ಶತಕೋಟಿಯನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ.

ಮ್ಯಾಪ್‌ ಮೈ ಇಂಡಿಯಾ (MapmyIndia) ಬಗ್ಗೆ ತಿಳಿಯೋಕೆ ನಮ್ಮ ಈ ವೀಡಿಯೋ ನೋಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!