ವೈಯಕ್ತಿಕ ಕಾನೂನುಗಳಿಂದ ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ತಡೆಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್;

ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಯಾವುದೇ ವೈಯಕ್ತಿಕ ಕಾನೂನಿನಡಿ ಸಂಪ್ರದಾಯಗಳ ಹೆಸರಿನಲ್ಲಿ ದುರ್ಬಲಗೊಳಿಸಲು ಸಾಧ್ಯವಿಲ್ಲ ಮತ್ತು ಬಾಲ್ಯ ವಿವಾಹಗಳು ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವ್ಯಕ್ತಿಯ ಸ್ವಾತಂತ್ರ್ಯವನ್ನು ಹರಣ ಮಾಡುತ್ತವೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ದೇಶದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

ವೈಯಕ್ತಿಕ ಕಾನೂನುಗಳ ಮೇಲೆ ಬಾಲ್ಯ ವಿವಾಹ ನಿಷೇಧ ಕಾಯ್ದೆ (ಪಿಸಿಎಂಎ) ಮೇಲುಗೈ ಸಾಧಿಸುತ್ತದೆಯೇ ಎಂಬ ವಿಷಯವು ಸಂಸತ್ತಿನಲ್ಲಿ ಪರಿಗಣನೆಗಾಗಿ ಬಾಕಿ ಇದೆ ಎಂಬುದನ್ನು ನ್ಯಾಯಪೀಠ ಉಲ್ಲೇಖಿಸಿದೆ. ವೈಯಕ್ತಿಕ ಕಾನೂನುಗಳಿಗಿಂತ ಬಾಲ್ಯ ವಿವಾಹ ನಿಷೇಧ ಕಾಯ್ದೆಯೇ ಮೇಲ್ಮಟ್ಟದ್ದು ಎಂದು ಪರಿಗಣಿಸುವಂತೆ ಕೇಂದ್ರವು ಸುಪ್ರೀಂ ಕೋರ್ಟ್​ಗೆ ಒತ್ತಾಯಿಸಿತ್ತು ಎಂಬುದು ಇಲ್ಲಿ ಗಮನಾರ್ಹ.ಪ್ರಸ್ತುತ ತೀರ್ಪಿನಲ್ಲಿ ಬಹಳ ವ್ಯಾಪಕವಾದ ಸಮಾಜಶಾಸ್ತ್ರೀಯ ವಿಶ್ಲೇಷಣೆಯನ್ನು ಮಾಡಲಾಗಿದೆ ಎಂದು ಸಿಜೆಐ ಎತ್ತಿ ತೋರಿಸಿದರು.

ಪಿಸಿಎಂಎ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕಾನೂನಾಗಿದೆ. ಇದು ಅಲ್ಪ ವಯಸ್ಸಿನ ಮಗುವಿನ ವಿವಾಹದ ದೊಡ್ಡ ಸಾಮಾಜಿಕ ಅಸ್ವಸ್ಥತೆಯನ್ನು ತಡೆಗಟ್ಟುವುದು ಮಾತ್ರವಲ್ಲದೆ, ಇದು ಆಯ್ಕೆಯ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ಉದ್ದೇಶಗಳನ್ನು ಸಹ ಹೊಂದಿದೆ. ಬಾಲ್ಯ ವಿವಾಹಗಳು ಮಗು ಪ್ರಬುದ್ಧನಾಗುವ ಮೊದಲು ಸಂಗಾತಿಯ ಆಯ್ಕೆ ಮತ್ತು ಜೀವನ ಮಾರ್ಗಗಳನ್ನು ಕಸಿದುಕೊಳ್ಳುತ್ತದೆ ಎಂದು ಸಿಜೆಐ ಹೇಳಿದರು.

ಬಡತನ, ಲಿಂಗ, ಅಸಮಾನತೆ, ಶಿಕ್ಷಣದ ಕೊರತೆಯಂತಹ ಬಾಲ್ಯ ವಿವಾಹದ ಮೂಲ ಕಾರಣಗಳನ್ನು ಪರಿಹರಿಸುವತ್ತ ಗಮನ ಹರಿಸುವುದರ ಜೊತೆಗೆ ವಿವಿಧ ಸಮುದಾಯಗಳ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಶಾಸನವಾಗಿ ಪಿಸಿಎಂಎ ವಿಶಾಲ ಸಾಮಾಜಿಕ ಚೌಕಟ್ಟಿನೊಳಗೆ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ಮಧ್ಯಸ್ಥಗಾರರ ಸಾಮೂಹಿಕ ಪ್ರಯತ್ನಗಳ ಮೂಲಕ ಮಾತ್ರ ಯಶಸ್ವಿಯಾಗುತ್ತದೆ. ಇದು ಬಹು ವಲಯ ಸಮನ್ವಯದ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಹೇಳಿದೆ.

ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಕೋರಿ ಸೊಸೈಟಿ ಫಾರ್ ಎನ್‌ಲೈಟೆನ್​ಮೆಂಟ್ ಅಂಡ್ ವಾಲೆಂಟರಿ ಆಕ್ಷನ್ ಸಲ್ಲಿಸಿದ ಪಿಐಎಲ್ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್​ ಮೇಲಿನ ತೀರ್ಪು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!