ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾದಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ED) ತೆಲುಗು ಚಿತ್ರರಂಗದ ಸ್ಟಾರ್ ನಟರಿಗೆ ನೊಟೀಸ್ ನೀಡಿದೆ.
ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರಿಗೆ ನೊಟೀಸ್ ಜಾರಿಮಾಡಲಾಗಿದೆ. ಅಕ್ರಮ ಬೆಟ್ಟಿಂಗ್ ಆ್ಯಪ್ ಕುರಿತ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಟಾಲಿವುಡ್ ಸೆಲೆಬ್ರಿಟಿಗಳಿಗೆ ಸೂಚಿಸಲಾಗಿದೆ.
ಹಣ ಗಳಿಸುವ ಆಸೆ ತೋರಿಸಿ ಯುವ ಜನತೆಯನ್ನು ಬೆಟ್ಟಿಂಗ್ ಆ್ಯಪ್ಗಳು ದಾರಿ ತಪ್ಪಿಸುತ್ತಿವೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಮಿಲಿಯನ್ಗಟ್ಟಲೆ ಫಾಲೋವರ್ಸ್ ಹೊಂದಿರುವ ವ್ಯಕ್ತಿಗಳು ಪ್ರಚಾರ ನೀಡುತ್ತಿದ್ದಾರೆ. ಇಂತಹ ಅಕ್ರಮ ಬೆಟ್ಟಿಂಗ್ ಆ್ಯಪ್ಗಳಿಂದ ಅನೇಕ ಯುವಕರು ಹಣ ಕಳೆದುಕೊಂಡಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ತೀವ್ರಗೊಂಡಿದೆ. ಜುಲೈ 23ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನಟ ರಾಣಾ ದಗ್ಗುಬಾಟಿ ಅವರಿಗೆ ನೊಟೀಸ್ ನೀಡಲಾಗಿದೆ. ಜುಲೈ 30ರಂದು ಪ್ರಕಾಶ್ ರಾಜ್, ಆಗಸ್ಟ್ 6ರಂದು ವಿಜಯ್ ದೇವರಕೊಂಡ, ಆಗಸ್ಟ್ 13ರಂದು ಲಕ್ಷ್ಮಿ ಮಂಚು ಅವರು ಇಡಿ ವಿಚಾರಣೆಗೆ ಹಾಜರಾಗಬೇಕಿದೆ.
ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ ಸೆಲೆಬ್ರಿಟಿಗಳ ಮೇಲೆ ಇಡಿ ಕೇಸ್ ದಾಖಲು ಮಾಡಿಕೊಂಡಿರುವುದರಿಂದ ತೆಲುಗು ಚಿತ್ರರಂಗದ ಇನ್ನಿತರ ನಟ-ನಟಿಯರಿಗೆ ಢವಢವ ಶುರುವಾಗಿದೆ.