ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರವಾದಿ ಮೊಹಮ್ಮದ್ ಕುರಿತಾದ ಹೇಳಿಕೆಗಾಗಿ ನೂಪುರ್ ಶರ್ಮಾಗೆ ಬೆದರಿಕೆ ಒಡ್ಡಿ, ಅವರ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದ ಭೀಮ್ ಸೇನಾ ಮುಖ್ಯಸ್ಥ ನವಾಬ್ ಸತ್ಪಾಲ್ ತನ್ವಾರ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಹರ್ಯಾಣದ ಗುರುಗ್ರಾಮದಲ್ಲಿ ತನ್ವಾರ್ ಅವರನ್ನು ಗುರುವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರವಾದಿ ಕುರಿತಾದ ಶರ್ಮಾ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ತನ್ವರ್, ಆಕೆಯ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದ. ಮತ್ತು ಕೋಮು ಸೌಹಾರ್ದತೆಯನ್ನು ಹಾಳುಗೆಡವಲು ಯತ್ನಿಸಿದ ಪ್ರಕರಣದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷವನ್ನು ಹರಡುವ ಮತ್ತು ಸಾರ್ವಜನಿಕ ಸ್ವಾಸ್ಥ್ತ್ಯವನ್ನು ಕೆಡಿಸುವ ಹಲವಾರು ಪೊಸ್ಟ್ ಗಳು ಪ್ರಕಟವಾಗಿದ್ದು ಈ ಸಂಬಂಧ ಹಲವು ದೂರುಗಳನ್ನು ಸಹ ಸ್ವೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದೂರುಗಳನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 19 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಅಂತಹ ಒಂದು ಪ್ರಕರಣದಲ್ಲಿ ತನ್ವರ್ ಬಂಧನ ವಾಗಿದ್ದು, ಭೀಮ್ ಸೇನೆಯ ಮುಖ್ಯಸ್ಥ ಎಂದು ಹೇಳಿಕೊಂಡಿರುವ ತನ್ವರ್ ಹಲವಾರು ಟ್ವಿಟರ್ ಹ್ಯಾಂಡಲ್‌ಗಳು ಮತ್ತು ಫೇಸ್‌ಬುಕ್ ಪ್ರೊಫೈಲ್ ಗಳನ್ನು ಹೊಂದಿದ್ದಾನೆ.
ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಎಫ್‌ಐಆರ್ ದಾಖಲಾದ ನಂತರ, ತನ್ವಾರ್ ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ, ಅತನನ್ನು ಗುರುಗ್ರಾಮ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ವರ್ ತನಗೆ ಕೆಲವು ವೈದ್ಯಕೀಯ ಸಮಸ್ಯೆಗಳಿವೆ ಎಂದು ತಿಳಿಸಿದ್ದು, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ