ಹೊಸದಿಗಂತ ವರದಿ, ಮಡಿಕೇರಿ:
ಸಂಸತ್ ಭವನದಲ್ಲಿ ಬುಧವಾರ ನಡೆದ ‘ಸ್ಮೋಕ್ ಅಟ್ಯಾಕ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರನ್ನು ಸಂಸತ್ ಸದಸ್ಯನ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ವೀರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ವೀರಾಜಪೇಟೆ ಬ್ಲಾಕ್ ಹಾಗೂ ನಗರ ಕಾಂಗ್ರೆಸ್ ವತಿಯಿಂದ ವೀರಾಜಪೇಟೆ ಗಡಿಯಾರ ಕಂಬದ ಬಳಿ ನಡೆದ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭ ಮಾತನಾಡಿದ ರಾಜ್ಯ ಕಾಂಗ್ರೆಸ್ ವಕ್ತಾರ ಸಂಕೇತ್ ಪೂವಯ್ಯ ಅವರು, ಕೂಡಲೇ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ಸಂಸತ್ತಿನ ಸದಸ್ಯತನವನ್ನು ರದ್ದುಗೊಳಿಸಬೇಕು. ಗೃಹ ಸಚಿವ ಅಮಿತ್ ಶಾ ಅವರು ಕೂಡಾ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಸತ್’ನಲ್ಲಿ ಸಂಸದರಿಗೇ ರಕ್ಷಣೆ ಇಲ್ಲದ ಮೇಲೆ ಇನ್ನು ಸಾರ್ವಜನಿಕರಿಗೆ ಇವರಿಂದ ರಕ್ಷಣೆ ನೀಡಲು ಸಾಧ್ಯವಿಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕು. ಸಂಸದ ಪ್ರತಾಪ್ ಸಿಂಹ ಅವರನ್ನು ವಜಾ ಮಾಡಬೇಕು ಎಂದು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಣ ರಂಜಿ ಪೂಣ್ಣಚ್ಚ, ಮುಖಂಡರಾದ ಗೋಪಾಲಕೃಷ್ಣ, ಸೇವಾದಳದ ಅಧ್ಯಕ್ಷ ಕಾವೇರಪ್ಪ, ನಗರ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜೇಶ್ ಪದ್ಮನಾಭ, ಮತಿನ್, ರಾಫಿ, ಅಲ್ಪಸಂಖ್ಯಾತರ ಘಟಕದ ಪ್ರಮುಖರಾದ ಜೋಕಿಂ, ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.