ಸೇವೆ ಖಾಯಂಗೆ ಒತ್ತಾಯಿಸಿ ಪೌರ ಕಾರ್ಮಿಕರಿಂದ ಪ್ರತಿಭಟನೆ

ಹೊಸದಿಗಂತ ವರದಿ ಶಿವಮೊಗ್ಗ:

ನೇರ ಪಾವತಿ ಪೌರ ಕಾರ್ಮಿಕರು ಹಾಗೂ ಹೊರಗುತ್ತಿಗೆ ಆಧಾರದ ಒಳಚರಂಡಿ ವಿಭಾಗದ ನೌಕರರನ್ನು ಕೂಡಲೇ ಖಾಯಂ ಮಾಡಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ನೇರಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನೇರ ಪಾವತಿ ಪೌರ ಕಾರ್ಮಿಕರು ಹಾಗೂ ಹೊರಗುತ್ತಿಗೆ ಆಧಾರದ ಒಳಚರಂಡಿ ವಿಭಾಗದ ನೌಕರರನ್ನು ಖಾಯಂ ಮಾಡಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 89 ಜನ ನೇರ ಪಾವತಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ದೊರೆತಿದೆ. ಆದರೆ ಮಹಾನಗರ ಪಾಲಿಕೆಯಲ್ಲಿ 105 ಜನ ನೇರ ಪಾವತಿ ಪೌರ ಕಾರ್ಮಿಕರು ಇದ್ದಾರೆ. 35 ಜನ ಹೊರಗುತ್ತಿಗೆ ಆಧಾರದ ಒಳಚರಂಡಿ ವಿಭಾಗದ ನೌಕರರು ಇದ್ದಾರೆ. ಈ ಎಲ್ಲಾ ನೌಕರರನ್ನು ಏಕ ಕಾಲದಲ್ಲಿ ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.

ಇದೇ ರೀತಿ ಭದ್ರಾವತಿ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ ಸೇರಿದಂತೆ ಎಲ್ಲಾ ತಾಲೂಕುಗಳ ನೇರ ಪಾವತಿ ಕಾರ್ಮಿಕರನ್ನು ಏಕ ಕಾಲದಲ್ಲಿ ಖಾಯಂ ಮಾಡಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ನಗರ ಅಧ್ಯಕ್ಷ ರವಿಕಿರಣ್, ಪ್ರಧಾನ ಕಾರ್ಯದರ್ಶಿ ನಾಗರಾಜ ಎಸ್, ಖಜಾಂಚಿ ನವೀನ್ ಇನ್ನಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!