ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ‌ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರಿಸಲು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಅ.13 ರಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿ ಗಬ್ಬೂರ ವೃತ್ತದ ಬೈಪಾಸ್ ರಸ್ತೆಯಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃಂತ್ಯುಜಯ ಸ್ವಾಮೀಜಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷದಿಂದ ನಿರಂತರ ಹೋರಾಟ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ 2ಎ ಮೀಸಲಾತಿ ನೀಡುವುದಾಗಿ ಘೋಷಿಸಿತು. ಆದರೆ ಚುನಾವಣೆ ನೀತಿ ಸಹಿತೆ ಜಾರಿಯಾಗಿದ್ದರಿಂದ ಹಾಗೇ ಉಳಿಯಿತು. ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಇಷ್ಟು ದಿನವಾದರೂ ಸರ್ಕಾರ ಸ್ಪಂದಿಸಿಲ್ಲ ಎಂದರು.

ವಿರಾಟ ಶಕ್ತಿ ಪ್ರದರ್ಶನ ಸೇರಿ ಅನೇಕ ಚಳುವಳಿ ಮಾಡಿದ್ದೇವೆ. ಈಗ ಸರ್ಕಾರವನ್ನು ಒತ್ತಾಯಿಸಲು 30 ಜಿಲ್ಲೆಯಲ್ಲಿ ಇಷ್ಟಲಿಂಗ ಪೂಜೆಯೊಂದಿಗೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ.‌ ಬೆಳಗಾವಿ, ವಿಜಯಪುರ, ಕೊಪ್ಪಳ ಬಾಗಲಕೋಟೆಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಐದನೇ ಸಮಾವೇಶ ಧಾರವಾಡದಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಪ್ರತಿಭಟನೆಯಲ್ಲಿ ಐದು ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಆಡಳಿತ ಸರ್ಕಾರದಲ್ಲಿ 11 ಶಾಸಕರಿದ್ದಾರೆ ಅವರು ಸಹ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೋರಾಟ‌ ಮುಗಿಯುವ ಮುಂಚೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಬಸವನಗೌಡ ಪಾಟೀಲ ಯತ್ನಾಳ ಅವರು ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈಗ ವಿರೋಧ ಪಕ್ಷದಲ್ಲಿರುವುದರಿಂದ ಆಡಳಿತ ಪಕ್ಷದ ಶಾಸಕರಿಗೆ ಸರ್ಕಾರಕ್ಕೆ ಒತ್ತಡ ಹಾಕಲು ಸಲಹೆ ನೀಡಿದ್ದಾರೆ. ಆದರೆ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಸಹ ಯಾವುದೇ ಶಾಸಕರಿಗೆ ಹೋರಾಟದಲ್ಲಿ ಭಾಗವಹಿಸಲು ಹೇಳಿಲ್ಲ. ಸ್ವತಃ ಅವರೇ ಸಮಾಜದ ಋಣ ತಿರಿಸಲು ಮುಂದಾಗುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!