ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಇದರಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರಾಣಬಿಟ್ಟಿದ್ದಾರೆ.
ಪ್ರತಿಭಟನಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್‌ನ ಬೆಂಬಲಿಗರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 14 ಪೊಲೀಸರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಇಸ್ಕಾನ್ ಮತ್ತು ಕಾಳಿ ದೇವಾಲಯಗಳು ಸೇರಿದಂತೆ ಹಿಂದೂ ದೇವಾಲಯ ಹಾಗೂ ಮನೆಗಳನ್ನು ಗುರಿಯಾಗಿಸಲಾಗಿದೆ. ಇದರಿಂದಾಗಿ ಮನೆಯೊಳಗೆ ಕುಳಿತಿರುವ ಜನರು ಕೂಡ ಭಯಭೀತರಾಗಿದ್ದಾರೆ.
ಭಾರತೀಯರು ಮನೆಯಿಂದ ಆಚೆ ಬಾರದಂತೆ ಸೂಚನೆ ನೀಡಲಾಗಿದೆ. ಹಿಂಸಾಚಾರದ ಪರಿಣಾಮವಾಗಿ ಅಧಿಕಾರಿಗಳು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಅನಿರ್ದಿಷ್ಟ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಗಿದೆ.
ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆ ವಿಚಾರವಾಗಿ ಗದ್ದಲ ಎದ್ದಿರುವ ಹಿನ್ನೆಲೆಯಲ್ಲಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಹೋರಾಡಿದ ಮಾಜಿ ಸೈನಿಕರ ಸಂಬಂಧಿಕರಿಗೆ ಈ ಕೋಟಾ ವ್ಯವಸ್ಥೆಯಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಶೇ.30ರಷ್ಟು ಮೀಸಲಾತಿಯನ್ನು ನೀಡಲಾಯಿತು.