ಹೊಸದಿಗಂತ ವರದಿ ಮೈಸೂರು:
ದಕ್ಷಿಣ ಕಾಶಿ ಎಂದು ಹೆಸರಾಗಿರುವ ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿದವರನ್ನು ತಕ್ಷಣ ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕೈಗೊಳ್ಳಬೇಕೆಂದು ಒತ್ತಾಯಿಸಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಪ್ರತಿಭಟನೆ ನಡೆಸಿದೆ.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ವಿವಿಧ ಘೋಷಣೆಗಳನ್ನು ಬರೆದಿದ್ದ ಭಿತ್ತಿ ಫಲಕಗಳನ್ನು ಹಿಡಿದು ಕೆಲಕಾಲ ಪ್ರತಿಭಟನೆ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು.
ಈ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ದುಷ್ಕರ್ಮಿಗಳು ಪೂರ್ವ ನಿಯೋಜಿತವಾಗಿ ಷಡ್ಯಂತ್ರ ಮಾಡುವ ಮೂಲಕ ಉತ್ಸವದಲ್ಲಿ ಗಲಾಟೆ ಮಾಡಿ,ಶ್ರೀಕಂಠೇಶ್ವರ ಸ್ವಾಮಿಗೆ ಧಿಕ್ಕಾರ ಕೂಗಿದ್ದಾರೆ. ಈ ಘಟನೆಯನ್ನು ಖಂಡಿಸಿ, ಭಕ್ತರು ಮತ್ತು ಸ್ಥಳೀಯರು ಶಾಂತಿಯುತವಾಗಿ ಪ್ರತಿಭಟಿಸಿದ್ದಾರೆ. ಆದರೆ ಪೋಲೀಸರು ಆರೋಪಿಗಳನ್ನು ಬಂಧಿಸುವ ಬದಲು ಪ್ರತಿಭಟಿಸಿದ ಭಕ್ತರ ವಿರುದ್ಧವೇ ದೂರು ದಾಖಲಿಸಿ, ಹಿಂದೂ ವಿರೋಧಿ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿದರು.
ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಡುತ್ತಿದ್ದು, ಕೋಟ್ಯಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದು,್ದ ಸಮಾಜದಲ್ಲಿ ಸಾಮರಸ್ಯ ಕೆಡುವಂತಾಗಿದೆ ಕಿಡಿಗೇಡಿಗಳನ್ನ ಬಂಧಿಸಿ ಪಾರದರ್ಶಕತೆ ಕಾಪಾಡುವಂತೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ್ರಾವ್, ಮೈಸೂರು ನಗರ ಪಾಲಿಕೆಯ ಮಾಜಿ ಸದಸ್ಯರಾದ ಮ.ವಿ.ರಾಮ್ಪ್ರಸಾದ್, ಸೌಭಾಗ್ಯ ಮೂರ್ತಿ, ಅರ್ಚಕರ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ, ಎಂ.ಆರ್ ಬಾಲಕೃಷ್ಣ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಕಾರ್ಯದರ್ಶಿ ಅಜಯ್ ಶಾಸ್ತಿç, ಮುಳ್ಳೂರು ಸುರೇಶ್, ಕಡಕೋಳ ಜಗದೀಶ್, ಸುಚೇಂದ್ರ, ಲತಾ ಬಾಲಕೃಷ್ಣ ,ಜ್ಯೋತಿ, ನಾಗಶ್ರೀ, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸಪ್ಪ, ಚಕ್ರಪಾಣಿ, ರಂಗನಾಥ್, ಮಧುಸೂದನ್, ಮುಳ್ಳೂರು ಸುರೇಶ್, ಶ್ರೀನಿವಾಸ್, ಮಂಜುನಾಥ್, ಸುದರ್ಶನ್ ,ಪ್ರಶಾಂತ್, ರಾಮು, ಮುರುಗೇಶ್, ಹಾಗೂ ಇನ್ನಿತರರು ಭಾಗವಹಿಸಿದ್ದರು.