ಹೊಸದಿಗಂತ ವರದಿ ಗದಗ:
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಕೇಂದ್ರದ ಓಬಿಸಿ ಮೀಸಲಾತಿಗಾಗಿ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದ್ದು ಇದೇ ಅ.30ರಂದು ತಾಲೂಕಿನ ಅಸುಂಡಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ದೇವರ ಮೊರೆ ಹೊಕ್ಕು ಹೋರಾಟ ಮಾಡಲು ಸಜ್ಜಾಗಿದ್ದೇವೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿಗಾಗಿ ಕಳೆದ 3 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಮೂರು ತಿಂಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡ ಹೋರಾಟಕ್ಕೆ ಮಣಿದ ಅಂದಿನ ಬಿಜೆಪಿ ಸರ್ಕಾರ 2ಎ ಮೀಸಲಾತಿ ನೀಡಿತ್ತು. ಆದರೆ ವಿಳಂಬದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಮತ್ತೆ ಇದೀಗ ಶ್ರಾವಣದಿಂದ ಹೋರಾಟ ಪ್ರಾರಂಭ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮೀಸಲಾತಿ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಿಎಂ ಸಭೆ ಕರೆಯುತ್ತೇನೆ ಎಂದು ಹೇಳಿದ್ದರು. ಆದರೆ ಇಂದಿಗೂ ಸಭೆ ಕರೆಯದಿರುವುದು ನೋವು ತಂದಿದೆ.
ಸರಕಾರಕ್ಕೆ ಎಚ್ಚರಿಸಲು ಇದೇ ಅ.30ರಂದು ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ ನಂತರ ಅಸುಂಡಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಇಷ್ಠಲಿಂಗ ಪೂಜೆ ಮಾಡುವ ಮೂಲಕ ಹೋರಾಟ ಆರಂಭ ಮಾಡಲಾಗುವುದು. ಸರ್ಕಾರ ಕೂಡಲೇ ಮೀಸಲಾತಿ ಕೊಡುವ ಯೋಚನೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಬೃಹತ್ ಪ್ರಮಾಣದ ಹೋರಾಟ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಅನಿಲಕುಮಾರ ಪಾಟೀಲ, ವಸಂತ ಪಡಗದ, ಈರಣ್ಣ ಬಾಳಿಕಾಯಿ, ಬಿ.ಬಿ.ಸೂರಪ್ಪಗೌಡ್ರ, ಶಿವರಾಜಗೌಡ ಹಿರೇಮನಿಪಾಟೀಲ, ಸ್ವಾತಿ ಅಕ್ಕಿ, ಸಂಗಮೇಶ ಹುಣಸಿಕಟ್ಟಿ, ಬಸವರಾಜ ದೇಸಾಯಿ, ರಮೇಶ ರೋಣದ, ಸಿದ್ದು ಪಾಟೀಲ, ಚೇತನ ಅಬ್ಬಿಗೇರಿ, ರಾಜು ಜಕ್ಕನಗೌಡ್ರ, ಬಸವರಾಜ ಮನಗುಂಡಿ ಸೇರಿದಂತೆ ಮುಂತಾದವರು ಇದ್ದರು.