ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜುಲೈ 1ರಂದು ಉಚಿತವಾಗಿ ಅಕ್ಕಿ ಕೊಡದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನೂತನ ಪ್ರೌಢಶಾಲೆ ಕಟ್ಟಡ ಭೂಮಿ ಪೂಜೆ ಬಳಿಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿದ್ದು , ಅಕ್ಕ ಪಕ್ಕದ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಜೊತೆ ಅಕ್ಕಿ ಖರೀದಿಗೆ ಮಾತುಕತೆ ನಡೆಯುತ್ತಿದೆ. ಹೀಗಾಗಿ ಜುಲೈ 1ರಿಂದ ಅನ್ನಭಾಗ್ಯ ಜಾರಿಯಾಗುವುದು ಬಹುತೇಕ ಅನುಮಾನ. ಆದ್ದರಿಂದ ಜು.1ರಿಂದ ಉಚಿತ ಅಕ್ಕಿ ನೀಡದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಜನಪ್ರೀಯತೆ ಬಹಳ ದಿನ ಉಳಿಯಲ್ಲ. ಅಕ್ಕಿ ವಿಷಯವಾಗಿ ಕಾಂಗ್ರೆಸ್ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಇದೀಗ ಅಕ್ಕಿ ಬರಲ್ಲ ಅಂತಾ ಕುಂಟು ನೆಪ ಹೇಳುತ್ತಿದಾರೆ. ಇದು ಕಾಂಗ್ರೆಸ್ ಗ್ಯಾರಂಟಿಯಿಂದ ಹಿಂದೆ ಹೋದಂತೆ ಅರ್ಥ. ಇದೀಗ ಛತ್ತೀಸಗಡದಿಂದ ಅಕ್ಕಿ ತರ್ತೀವಿ ಅಂತೀದಾರೆ. ನಮಗೆ, ಬಡಜನರಿಗೆ ಒಳ್ಳೆದಾದ್ರೆ ಸಾಕು ಎಂದು ಹೇಳಿದರು.