ಹೊಸದಿಗಂತ ವರದಿ ಮಡಿಕೇರಿ:
ಮಣಿಪುರದಲ್ಲಿ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೊಡಗು ಜಿಲ್ಲಾ ಕ್ರೈಸ್ತ ಸಮುದಾಯದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಸಂತ ಮೈಕಲರ ದೇವಾಲಯದಲ್ಲಿ ಜಮಾಯಿಸಿದ ಕ್ರೈಸ್ತ ಬಾಂಧವರು, ಹಿಂಸಾಚಾರ ಕೊನೆಯಾಗಲು ಕೈಗೆ ಕಪ್ಪು ಪಟ್ಟಿ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ದೇವಾಲಯದಿಂದ ಇಂದಿರಾಗಾಂಧಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭ ಮಣಿಪುರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅಲ್ಲಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆಗೆ ಆಗ್ರಹಿಸಿದರು. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಹಿಂಸಾಚಾರ ಅಂತ್ಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮೆರವಣಿಗೆಯಲ್ಲಿ ಶವಪೆಟ್ಟಿಗೆಯನ್ನು ಹೊತ್ತೊಯ್ಯುವ ಮೂಲಕ ದೌರ್ಜನ್ಯವನ್ನು ಖಂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಕ್ರೈಸ್ತ ಮುಖಂಡ ಸುನಿಲ್ ಪತ್ರಾವೊ, ಮಣಿಪುರದಲ್ಲಿ ನಿರಂತರವಾಗಿ ಕ್ರೈಸ್ತರು, ಅವರ ಪ್ರಾರ್ಥನಾ ಮಂದಿರ, ಆಸ್ತಿಪಾಸ್ತಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಅಲ್ಲಿನ ಚುನಾಯಿತ ಸರ್ಕಾರ ರಾಜ್ಯಧರ್ಮ ಪಾಲಿಸಲು ನಿಷ್ಕ್ರಿಯವಾಗಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಘಟನೆಯನ್ನು ಖಂಡಿಸಿ ಕೊಡಗು ಜಿಲ್ಲೆಯ ಕ್ರೈಸ್ತ ಸಮುದಾಯದಿಂದ ರಾಜಕೀಯ ರಹಿತ ಹೋರಾಟ ಮಾಡಲಾಗಿದೆ. ಮಾನವ ಹಕ್ಕುಗಳ ಆಯೋಗ ಮಧ್ಯೆ ಪ್ರವೇಶಿಸಿ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೊನೆಗಾಣಿಸಬೇಕು ಎಂದು ಆಗ್ರಹಿಸಿದರು.
ವೀರಾಜಪೇಟೆ ಧರ್ಮಕೇಂದ್ರದ ಧರ್ಮಗುರು ಫಾ.ಡಾ.ದಯಾನಂದ ಪ್ರಭು ಮಾತನಾಡಿ, ಒಂದು ಕಾಲದಲ್ಲಿ ಅಲ್ಲಿನ ಎಲ್ಲಾ ಜನಾಂಗಗಳು ಪ್ರೀತಿ ವಿಶ್ವಾಸದಿಂದ ಬಾಳುತ್ತಿದ್ದರು. ಆದರೆ ಡಬಲ್ ಎಂಜಿನ್ ಸರ್ಕಾರ ಅಲ್ಲಿನ ಜನತೆಗೆ ಒಳ್ಳೆಯದರ ಬದಲು ಕೆಟ್ಟದನ್ನೇ ಮಾಡುತ್ತಿದೆ. ಅಭಿವೃದ್ಧಿ, ಶಾಂತಿ ಸಮಾಧಾನಕ್ಕೆ ಒತ್ತುಕೊಡಬೇಕಾದ ಸರ್ಕಾರ, ಅಸಂಖ್ಯಾತ ಕ್ರೈಸ್ತರ ಮೇಲೆ ದೌರ್ಜನ್ಯ ಮಾಡುತ್ತಿದೆ. ಈಗಾಗಲೇ 130ಕ್ಕಿಂತ ಅಧಿಕ ಮಂದಿ ಕ್ರೈಸ್ತರು ಪ್ರಾಣ ಕಳೆದುಕೊಂಡಿದ್ದಾರೆ. 250 ಚರ್ಚ್‌ಗಳನ್ನು ಕೆಡವಿ ಹಾಕಲಾಗಿದೆ. ಮನೆ ಕಟ್ಟಡಗಳಿಗೆ ನಿರಂತರವಾಗಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ರೈಸ್ತರು ಶಾಂತಿಪ್ರಿಯರಾಗಿದ್ದು, ಯಾವುದೇ ಜನಾಂಗದ ಮೇಲೆ ದ್ವೇಷ ಸಾಧಿಸುವ ಕೆಲಸ ಮಾಡುತ್ತಿಲ್ಲ. ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಯಾಗಬೇಕು. ಎಲ್ಲಾ ಜನಾಂಗದವರ ನಡುವೆ ಮೊದಲಿದ್ದ ಶಾಂತಿ ಸಮಾಧಾನ ಮತ್ತೆ ಬರಬೇಕು. ಪ್ರಧಾನಮಂತ್ರಿ, ಕೇಂದ್ರ ಗೃಹ ಮಂತ್ರಿಗಳು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕೆಡವಿ ಹಾಕಿರುವ ದೇವಾಲಯವನ್ನು ಮರುನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಮಡಿಕೇರಿ ಸಂತ ಮೈಕಲರ ದೇವಾಲಯದ ಧರ್ಮಗುರು ಫಾ. ಜಾರ್ಜ್ ದೀಪಕ್ ಮಾತನಾಡಿ, ಭಾರತ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ. ಇದುವೇ ನಮ್ಮ ಸಂವಿಧಾನದ ಸೌಂದರ್ಯ. ದೇಶದ ಪ್ರಗತಿಗೆ ಎಲ್ಲರ ತ್ಯಾಗ, ಶ್ರಮ, ಸಹಕಾರ ಅತ್ಯಗತ್ಯ. ಒಬ್ಬರು ಮತ್ತೊಬ್ಬರನ್ನು ಪ್ರೀತಿಸಬೇಕು, ಗೌರವದಿಂದ ಕಾಣಬೇಕು. ನೊಂದವರಿಗೆ ಸಹಾಯ ಮಾಡಬೇಕು. ಆದರೆ ಅಲ್ಪಸಂಖ್ಯಾತರ ಮೇಲೆ ಹೆಚ್ಚಿನ ದೌರ್ಜನ್ಯಗಳು ನಮ್ಮ ದೇಶದಲ್ಲೇ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಾಂಗಗಳ ನಡುವೆ ದ್ವೇಷ ಸಾಧಿಸಿ ದೇಶದ ಪ್ರಗತಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಹಿಂಸಾಕೃತ್ಯಗಳನ್ನು ಕೊನೆಗಾಣಿಸಬೇಕು. ನಾವೆಲ್ಲರೂ ಭಾರತೀಯರು. ಪ್ರತಿಯೊಬ್ಬನಿಗೂ ಇಲ್ಲಿ ಬದುಕಲು ಹಕ್ಕಿದೆ. ಆ ಹಕ್ಕಿಗೆ ಗೌರವ ಕೊಡುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ನಮ್ಮಂತೆಯೇ ಇತರರು ಬದುಕಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ರಾಷ್ಟ್ರಪತಿಗಳು, ಕೇಂದ್ರ ಮಾನವ ಹಕ್ಕು ಆಯೋಗ, ಮತ್ತಿತರರಿಗೆ ಜಿಲ್ಲಾಡಳಿತ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ವಿವಿಧ ಧರ್ಮಕೇಂದ್ರದ ಧರ್ಮಗುರುಗಳಾದ ಫಾ. ನವೀನ್ ಕುಮಾರ್, ಫಾ.ಐಸಾಕ್ ರತ್ನಾಕರ್, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಸ್ಥಾಪಕಾಧ್ಯಕ್ಷ ಲಾರೆನ್ಸ್, ಉಪಾಧ್ಯಕ್ಷ ಜಾನ್ಸನ್ ಪಿಂಟೋ, ಕ್ರೈಸ್ತ ಮುಖಂಡರಾದ ಬೇಬಿ ಮ್ಯಾಥ್ಯೂ, ಜೋಕಿಂ ರಾಡ್ರಿಗಸ್, ತೆರೆಸಾ ವಿಕ್ಟರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.