ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರು ಹರಿಸುವ ವಿಚಾರ ಕುರಿತಂತೆ ಇಂದು ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ. ಅರ್ಜಿ ವಿಚಾರಣೆಗೂ ಮುನ್ನವೇ ಮಂಡ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಕನ್ನಡ ಪರ ಸಂಘಟನೆಗಳ ಸದಸ್ಯರು ರಸ್ತೆ ಮಧ್ಯೆ ಮಲಗಿ ಉರುಳು ಸೇವೆ ಮಾಡುವ ಮೂಲಕ ವಿಭಿನ್ನ ಹೋರಾಟ ನಡೆಸಿದರು.
ಕಾವೇರಿ ನೀರಿಗಾಗಿ ಉರುಳು ಸೇವೆಯೇನು, ಏನು ಮಾಡೋದಕ್ಕೂ ಕನ್ನಡಿಗರು ಸಿದ್ಧ. ಕಾವೇರಿ ನಮ್ಮದು, ಕಾವೇರಿ ರಕ್ಷಣೆ ನಮ್ಮ ಹೊಣೆ. ರಕ್ತವನ್ನು ಚೆಲ್ಲುತ್ತೇವೆ ಹೊರತು ನೀರನ್ನು ಬಿಡೋದಿಲ್ಲ ಎಂದು ಘೋಷಣೆ ಕೂಗಿದರು.
ಇತ್ತ ಇಂದು, ಕರ್ನಾಟಕವು ಕಾವೇರಿ ನೀರನ್ನು ಸಮರ್ಪಕವಾಗಿ ಹರಿಸುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ಈ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.