ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಸ್ಥಾನಮಾನ ಮತ್ತು ಆರನೇ ಪರಿಚ್ಛೇದದಡಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಲಡಾಖ್ ನಲ್ಲಿ ಬುಧವಾರ ನಡೆಸಲಾಗುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಬಿಜೆಪಿ ಕಚೇರಿ ಮತ್ತು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಲೇಹ್ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಸಹ ನಡೆಸಿದರು. ನಂತರ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿ ಲಾಠಿ ಪ್ರಹಾರ ನಡೆಸಿದರು.
ಇದರ ನಡುವೆ ಹವಾಮಾನ ಹೋಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ 15 ದಿನಗಳ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.
ನಾನು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಲಡಾಖ್‌ನ ಯುವಕರನ್ನು ವಿನಂತಿಸುತ್ತೇನೆ. ನಮ್ಮ ಉದ್ದೇಶಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ನಾವು ಲಡಾಖ್ ಮತ್ತು ದೇಶದಲ್ಲಿ ಅಸ್ಥಿರತೆಯನ್ನು ಬಯಸುವುದಿಲ್ಲ ಎಂದು ಮುಷ್ಕರದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ತಮ್ಮ ಬೆಂಬಲಿಗರಿಗೆ ವಾಂಗ್‌ಚುಕ್ ಹೇಳಿದರು.
ಹಿಂಸಾಚಾರ ತೀವ್ರಗೊಳ್ಳುತ್ತಿದ್ದಂತೆ, ವಾಂಗ್‌ಚುಕ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶ ಬಿಡುಗಡೆ ಮಾಡಿ, ಯುವಕರು ಶಾಂತಿಯುತವಾಗಿರಬೇಕು ಮತ್ತು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು.