ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರಿ, ಕೊಲೆ ಆರೋಪಿ ರಿತೇಶಕುಮಾರ್ ನನ್ನು ಗುಂಡಿಕ್ಕಿ ಕೊಂದ ಪಿಎಸ್‌ಐ ಅನ್ನಪೂರ್ಣ ಅವರಿಗೆ ಅತ್ಯುನ್ನತ ಪದಕ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಅನ್ನಪೂರ್ಣ ಅವರಿಗೆ ಪದಕ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಶಿಫಾರಸು ಮಾಡುತ್ತೇನೆ ಎಂದು ಹೇಳಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದೇನೆ. ಇಂಥ ಪ್ರಕರಣಗಳಲ್ಲಿ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಸಿಗಬೇಕು ಎಂದರು.
ನಮ್ಮ ಇಲಾಖೆಯಿಂದ ಸರ್ಕಾರಿ ನೌಕರರಿಗೆ ರಾಣಿ ಚನ್ನಮ್ಮ ಪ್ರಶಸ್ತಿ ನೀಡುವುದಿಲ್ಲ. ಒಂದು ವೇಳೆ ಸರ್ಕಾರಿ ನೌಕರರಿಗೂ ಪ್ರಶಸ್ತಿ ನೀಡಿದರೆ, ಅನ್ನಪೂರ್ಣ ಮೊದಲಿಗರಾಗಿರುತ್ತಾರೆ ಎಂದರು.