ಹೊಸದಿಗಂತ ಡಿಜಿಟಲ್ ಡೆಸ್ಕ್
ದೇಶದ ಕ್ರೀಡಾ ಆಡಳಿತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದ್ದ ದಿಗ್ಗಜ ಆಟಗಾರ್ತಿ ಪಿಟಿ ಉಷಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನ (ಐಒಎ) ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
58 ವರ್ಷ ವಯಸ್ಸಿನ ಉಷಾ, ಅನೇಕ ಏಷ್ಯನ್ ಗೇಮ್ಸ್ ಚಿನ್ನದ ಪದಕಗಳ ವಿಜೇತೆ. 1984 ಲಾಸ್ ಏಂಜಲೀಸ್ ಒಲಿಂಪಿಕ್ಸ್ 400 ಮೀ ಹರ್ಡಲ್ಸ್ ಫೈನಲ್ನಲ್ಲಿ ಕಂಚುಗೆದ್ದಿದ್ದರು. ಇದೀಗ ಒಲಂಪಿಕ್ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಉನ್ನತ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಷಾ ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದು ಬಣರಾಜಕೀಯದಿಂದ ಬಳಲಿದ್ದ ಐಒಎಯ ದೀರ್ಘಕಾಲದ ಬಿಕ್ಕಟ್ಟನ್ನು ಕೊನೆಗೊಳಿಸಿದೆ. ಈ ತಿಂಗಳು ಚುನಾವಣೆಗಳನ್ನು ನಡೆಸದಿದ್ದರೆ ಅಮಾನತು ಮಾಡುವುದಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಎಚ್ಚರಿಸಿತ್ತು. ಚುನಾವಣೆಗಳು ಮೂಲತಃ ಡಿಸೆಂಬರ್ 2021 ರಲ್ಲಿ ನಡೆಯಬೇಕಿತ್ತು. ಸುಪ್ರೀಂ ಕೋರ್ಟ್ನಿಂದ ನೇಮಕಗೊಂಡ ನಿವೃತ್ತ ಎಸ್ಸಿ ನ್ಯಾಯಾಧೀಶ ಎಲ್ ನಾಗೇಶ್ವರ ರಾವ್ ಅವರ ಮೇಲ್ವಿಚಾರಣೆಯಲ್ಲಿ ಚುನಾವಣೆಗಳು ನಡೆದವು.
ಕಳೆದ ತಿಂಗಳ ಕೊನೆಯಲ್ಲಿ ಉಷಾ ಅವರು ಉನ್ನತ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿ ಹೊರಹೊಮ್ಮಿದ ನಂತರ ಉನ್ನತ ಹುದ್ದೆಗೆ ಜೌಪಚಾರಿಕ ಆಯ್ಕೆಯಷ್ಟೇ ಬಾಕಿಯಿತ್ತು.
ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (ಎನ್ಆರ್ಎಐ) ಅಜಯ್ ಪಟೇಲ್ ಅವರು ಹಿರಿಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಮತ್ತು ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷೆ ರಾಜಲಕ್ಷ್ಮಿ ಸಿಂಗ್ ಡಿಯೋ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯುಎಫ್) ಅಧ್ಯಕ್ಷ ಸಹದೇವ್ ಯಾದವ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅಧ್ಯಕ್ಷ ಮತ್ತು ಮಾಜಿ ಗೋಲ್ಕೀಪರ್ ಕಲ್ಯಾಣ್ ಚೌಬೆ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ