ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರು ಟಚ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ಯಾಕ್ಸಿ ಚಾಲಕನ ಮೇಲೆ ಇನ್ನೋವಾ ಕಾರು ಚಾಲಕ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ ಹಿನ್ನೆಲೆ ಸಾರ್ವಜನಿಕರು ಇನ್ನೋವಾ ಕಾರು ಪುಡಿಗಟ್ಟಿದ ಘಟನೆ ಬೆಂಗಳೂರಿನ ಓಕಳಿಪುರಂ ಜಂಕ್ಷನ್‌ನಲ್ಲಿ ನಡೆದಿದೆ.
ಮೆಜೆಸ್ಟಿಕ್ ಸಮೀಪದಲ್ಲಿರುವ ರೈಲ್ವೇ ಗೇಟ್ ಹಿಂಭಾಗದ ರಸ್ತೆಯಲ್ಲಿ ಕ್ಯಾಬ್ ಚಾಲಕ ಕುಮಾರ್ ಪ್ಯಾಸೆಂಜರ್ ಕರೆದುಕೊಂಡು ವಿಜಯನಗರದಿಂದ ಬರುತ್ತಿದ್ದ. ಇದೇ ವೇಳೆ ಹಿಂಬದಿಯಿಂದ ಬಂದ ಇನ್ನೋವಾ ಕಾರು ಇಟಿಯೋಸ್ ಕ್ಯಾಬ್‌ಗೆ ಟಚ್ ಆಗಿದೆ. ಈ ವೇಳೆ ಇಬ್ಬರು ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕಾರಿಂದ ಇಳಿದು ಬಂದ ಇನ್ನೋವಾ ಕಾರು ಚಾಲಕ ಕ್ಯಾಬ್ ಚಾಲಕನಿಗೆ ಥಳಿಸಿದ್ದಾನೆ.
ಕಾರಲ್ಲಿ ಪ್ಯಾಸೆಂಜರ್ ಇದ್ದಿದ್ದರಿಂದ ಇಟಿಯೋಸ್ ಕಾರು ಚಾಲಕ ಸುಮ್ಮನಿದ್ದ. ಇಷ್ಟಾದರೂ ಸುಮ್ಮನಾಗದ ಇನ್ನೋವ ಕಾರು ಚಾಲಕ ಕಾರಿನಿಂದ ಮಚ್ಚು ತಂದು ಇಟಿಯೋಸ್ ಕಾರು ಚಾಲಕನ ಕುತ್ತಿಗೆಗೆ ಇಟ್ಟು ಬೆದರಿಕೆ ಹಾಕಿದ್ದಾನೆ. ಇದರಿಂದ ಆತ ಭಯಗೊಂಡರೇ, ಅಲ್ಲೇ ಇದ್ದ ಜನರು ರೊಚ್ಚಿಗೆದ್ದರು. ಇನ್ನೋವಾ ಕಾರು ಚಾಲಕನ ಅಟ್ಟಹಾಸ ಕಂಡ ಜನರು ಆತನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಲ್ಲಿನಿಂದ ಕಾರಿನ ಗಾಜುಗಳನ್ನ ಪುಡಿಪುಡಿ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಆಸಾಮಿ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿ ಆಗಿದ್ದಾನೆ.