ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ, ಅವರ ಕೊನೆಯ ಚಿತ್ರ ಜೇಮ್ಸ್ ಸಹ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ರಾಜಕುಮಾರನನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳುತ್ತಿದ್ದಾರೆ. ಚಿತ್ರ ವಿಶ್ವಾದ್ಯಂತ ಬಿಡುಗಡೆ ಕಂಡಿದ್ದು, ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಮಂಡ್ಯ: ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದ ಹಾಗೂ ಮಾನವೀಯತೆಯ ಶಿಖರ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದರು. ನಗರದ ಸಂಜಯ್ ವೃತ್ತದಲ್ಲಿ ಜಮಾವಣೆಗೊಂಡ ಅವರ ಅಭಿಮಾನಿಗಳು, ಪುನೀತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದರು.
ಸಂಜಯ್ ಚಿತ್ರಮಂದಿರದಲ್ಲಿ ಬೃಹದಾಕಾರದ ಕಟೌಟ್ ಗಳು ರಾರಾಜಿಸಿದವು. ಪುನೀತ್ ಅವರ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಹುಟ್ಟು ಹಬ್ಬದ ದಿನದಂದೇ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಿಳ್ಳೇ ಹಾಕುತ್ತಾ ಪುನೀತ್ ಅವರಿಗೆ ಜೈಕಾರದ ಘೋಷಣೆಗಳನ್ನು ಕೂಗುತ್ತಾ ಅಪ್ಪು ಭಾವಚಿತ್ರಗಳನ್ನಿಡಿದು ಕುಣಿದು ಕುಪ್ಪಳಿಸಿದರು.
ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆ ಮೂಲಕ ಸಂಜಯ್ ಚಿತ್ರಮಂದಿರದ ಮುಂಭಾಗ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದರು. ಈ ವೇಳೆ ಅಪ್ಪು ಅಭಿಮಾನಿಗಳಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶಿವಮೊಗ್ಗ: ಪವರ್‌ಸ್ಟಾರ್ ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭ್ರಮ ಸಡಗರಗಳು ಮೇಳೈಸಿದ್ದವು. ನಗರದ ಹೆಚ್‌ಪಿಸಿ, ಲಕ್ಷ್ಮೀ ಮತ್ತು ಮಂಜುನಾಥ ಚಿತ್ರ ಮಂದಿರಗಳಲ್ಲಿ ಚಿತ್ರ ತೆರೆಕಂಡಿದೆ. ಸಾವಿರಾರು ಅಭಿಮಾನಿಗಳು ಬುಧವಾರ ಬೆಳಿಗ್ಗೆಯಿಂದಲೇ ಪೋಸ್ಟರ್‌ಗಳನ್ನು ಹಿಡಿದು, ಜೈಕಾರ ಕೂಗಿ, ಅಪ್ಪುಕೊನೆಯ ಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ.
ಇನ್ನು ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳ ಬಳಗದಿಂದ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ನೇತ್ರದಾನಕ್ಕಾಗಿ ನೋಂದಣಿ, ಆರೋಗ್ಯ ಉಚಿತ ತಪಾಸಣೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಭೋಜನದ ವ್ಯವಸ್ಥೆ ಸಹ ಏರ್ಪಡಿಸಲಾಗಿತ್ತು.
ಹುಬ್ಬಳ್ಳಿ: ಜೆಮ್ಸ್ ಸಿನಿಮಾ ಬಿಡುಗಡೆ ಸಂಭ್ರಮವನ್ನು ಹುಬ್ಬಳ್ಳಿ ಜೈ ರಾಜವಂಶ ಅಭಿಮಾನಿಗಳ ಸಂಘ ಮತ್ತು ಎಂ.ಎಂ. ಜೋಶಿ ಆಸ್ಪತ್ರೆ ಸಹಯೋಗದಲ್ಲಿ ವಿಶೇಷವಾಗಿ ಆಚರಿಸಲಾಯಿತು. ಅಪ್ಸಾರ ಚಿತ್ರ ಮಂದಿರದ ಎದುರು ಅಭಿಮಾನಿ ಬಳಗದಿಂದ ನೂರಾರು ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ನಡೆಸಲಾಯಿತು. ೫೦ ಕ್ಕೂ ಹೆಚ್ಚು ಅಪ್ಪು ಅಭಿಮಾನಿಗಳು ನೇತ್ರದಾನಕ್ಕೆ ನೋಂದಣಿ ಮಾಡಿದರು. ಅಪ್ಪು ಅಭಿಮಾನಿ ಬಳಗದಿಂದ ಪುನೀತ್ ಕಟೌಟ್ಗೆ ಹಾಲಿ ಅಭಿಷೇಕ, ಉಚಿತ ಊಟ ಉಪಹಾರ ಮತ್ತು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ನೃತ್ಯ ಮಾಡಿ ಸಂಭ್ರಮಿಸಿದರು.
ರಾಮನಗರ: ಜಿಲ್ಲೆಯ ವಿವಿಧ ಚಿತ್ರಮಂದಿರಗಳಲ್ಲಿ ಗುರುವಾರ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ ಆಗಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ರಾಮನಗರದ ಶಾನ್ ಚಿತ್ರಮಂದಿರದಲ್ಲಿ ವಿದ್ಯಾರ್ಥಿನಿಯರು ಪುನೀತ್ ಹಾಡಿಗೆ ಕುಣಿದು ಸಂಭ್ರಮಿಸಿದರು. ಚಿತ್ರಮಂದಿರ ಸಂಪೂರ್ಣ ತುಂಬಿದ್ದು, ಅಭಿಮಾನಿಗಳಿಗಾಗಿ ಅನ್ನ ಸಂತರ್ಪಣೆ ನಡೆಯಿತು.