ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ, ಹಾಗೂ ಶಿರೋಮಣಿ ಅಕಾಲಿದಳ(ಎಸ್ಎಡಿ)ದ ಮಾಜಿ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಮತ್ತು ಅವರ ಇತರ ಸಹ ಮಂತ್ರಿಗಳಿಗೆ ದರ್ಬಾರ್ ಸಾಹಿಬ್ನ ಸ್ನಾನಗೃಹ ಮತ್ತು ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲು ಅತ್ಯುನ್ನತ ಸಂಸ್ಥೆಯಾಗಿರುವ ಶ್ರೀ ಅಕಾಲ್ ತಖ್ತ್ ಆದೇಶಿಸಿದೆ.
ಸುಖ್ಬೀರ್ ಬಾದಲ್ ಮತ್ತು ಇತರ ಸಚಿವರು ತನ್ನ ತಪ್ಪುಗಳನ್ನು ಒಪ್ಪಿಕೊಂಡು ಅಕಾಲ್ ತಖ್ತ್ಗೆ ಬೇಷರತ್ ಕ್ಷಮೆಯಾಚಿಸಿದ ನಂತರ, ಇಂದು ಮುಂಜಾನೆ, ಸಿಖ್ಖರ ಐವರು ಪ್ರಧಾನ ಅರ್ಚಕರು – ಅಕಾಲ್ ತಖ್ತ್ ಜಥೇದಾರ್ ಗಿಯಾನಿ ರಘಬೀರ್ ಸಿಂಗ್ ನೇತೃತ್ವದ – ‘ತಂಖಾಹ್ (ದುಷ್ಕೃತ್ಯಕ್ಕೆ ಧಾರ್ಮಿಕ ಶಿಕ್ಷೆ)’ ಪ್ರಮಾಣವನ್ನು ಘೋಷಿಸಿದರು.
ಈ ವೇಳೆ ಸಿಖ್ ನಾಯಕರು ‘ಹೌದು’ ಅಥವಾ ‘ಇಲ್ಲ’ ಎಂದು ಪ್ರತಿಕ್ರಿಯಿಸುವಂತೆ ಕೇಳಿಕೊಂಡಿದ್ದರು. ಎಲ್ಲ ಪ್ರಶ್ನೆಗಳಿಗೂ ಸುಖಬೀರ್ ಬಾದಲ್ ‘ಹೌದು’ ಎಂದು ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ಶಿಕ್ಷೆಯನ್ನು ಜಥೇದಾರ್ ಗಿಯಾನಿ ರಘ್ಬೀರ್ ಸಿಂಗ್ ಅವರು ಘೋಷಿಸಿ, ಎಸ್ಎಡಿ ಅಧ್ಯಕ್ಷ ಮತ್ತು ಕಚೇರಿಗೆ ಚುನಾವಣೆ ನಡೆಸಲು ಸಮಿತಿಯನ್ನು ರಚಿಸುವುದರ ಜೊತೆಗೆ ಪಕ್ಷದ ಮುಖ್ಯಸ್ಥರಾಗಿ ಸುಖ್ಬೀರ್ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸುವಂತೆ ಶಿರೋಮಣಿ ಅಕಾಲಿದಳದ (ಎಸ್ಎಡಿ) ಕಾರ್ಯಕಾರಿ ಸಮಿತಿಗೆ ಸೂಚಿಸಿದರು.
ಗಾಲಿಕುರ್ಚಿಯಲ್ಲಿರುವ ಸುಖಬೀರ್ ಬಾದಲ್ ಮತ್ತು ಕೋರ್ ಕಮಿಟಿ ಸದಸ್ಯರು ಮತ್ತು 2015 ರಲ್ಲಿ ಕ್ಯಾಬಿನೆಟ್ ಸದಸ್ಯರಾಗಿದ್ದ ಅಕಾಲಿದಳದ ನಾಯಕರು ಡಿಸೆಂಬರ್ 3 ರಂದು ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ಸ್ನಾನಗೃಹಗಳನ್ನು ಸ್ವಚ್ಛಗೊಳಿಸಲಿದ್ದಾರೆ. ಇದಾದ ನಂತರ ಸ್ನಾನ ಮಾಡಿ ಲಂಗರ ಬಡಿಸುವರು.
2007 ರಿಂದ 2017 ರವರೆಗೆ ಪಂಜಾಬ್ನಲ್ಲಿ ಅಧಿಕಾರದಲ್ಲಿದ್ದಾಗ ಪಕ್ಷವು ಮಾಡಿದ ತಪ್ಪುಗಳಿಗಾಗಿ ಧಾರ್ಮಿಕ ದುಷ್ಕೃತ್ಯದ ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟ ನಂತರ ಸುಖ್ಬೀರ್ ಬಾದಲ್ ಅವರನ್ನು ಆಗಸ್ಟ್ನಲ್ಲಿ ಅಕಾಲ್ ತಖ್ತ್ ಅವರು “ತಂಖೈಯಾ” ಎಂದು ಘೋಷಿಸಿದರು. ಪಂಜಾಬ್ನ ಕೆಲವು ಭಾಗಗಳಲ್ಲಿ ಡೇರಾ ಅನುಯಾಯಿಗಳು ಮತ್ತು ಸಿಖ್ಖರ ನಡುವೆ ಘರ್ಷಣೆಗೆ ಕಾರಣವಾದ ಹತ್ಯಾಕಾಂಡದ ಪ್ರಕರಣಗಳಿಗೆ ಗುರ್ಮೀತ್ ರಾಮ್ ರಹೀಮ್ಗೆ ಕ್ಷಮಾದಾನ ನೀಡುವುದು ಇದರಲ್ಲಿ ಸೇರಿದೆ.
ಇದೇ ವೇಳೆ ಕಾಲು ಮುರಿತದಿಂದ ಗಾಲಿಕುರ್ಚಿಯಲ್ಲಿದ್ದ ಸುಖ್ಬೀರ್ ಬಾದಲ್ ಮತ್ತು ಬಂಡಾಯ ನಾಯಕ ಸುಖದೇವ್ ಸಿಂಗ್ ಧಿಂಡ್ಸಾ ಅವರನ್ನು ಎರಡು ದಿನಗಳ ಕಾಲ ಗೋಲ್ಡನ್ ಟೆಂಪಲ್ನ ಹೊರಗೆ ‘ಸೇವಾದರ್’ ಡ್ರೆಸ್ ಧರಿಸಿ ತಲಾ ಒಂದು ಗಂಟೆ ಕುಳಿತುಕೊಳ್ಳುವಂತೆ ಕೇಳಲಾಗಿದೆ ಎಂದು ಗಿಯಾನಿ ರಘ್ಬೀರ್ ಸಿಂಗ್ ಹೇಳಿದ್ದಾರೆ. ಅವರು ತಖ್ತ್ ಕೇಸ್ಗಢ್ ಸಾಹಿಬ್, ತಖ್ತ್ ದಮ್ದಾಮಾ ಸಾಹಿಬ್, ಮುಕ್ತ್ಸರ್ನಲ್ಲಿ ದರ್ಬಾರ್ ಸಾಹಿಬ್ ಮತ್ತು ಫತೇಘರ್ ಸಾಹಿಬ್ನಲ್ಲಿ ತಲಾ ಎರಡು ದಿನಗಳ ಕಾಲ ‘ಸೇವಾದಾರ’ ಸೇವೆಯನ್ನು ಮಾಡುತ್ತಾರೆ. ಹಾಗೂ ಸುಖಬೀರ್ ಬಾದಲ್ ಮತ್ತು ಸುಖದೇವ್ ದಿಂಡ್ಸಾ ಇಬ್ಬರಿಗೂ ‘ಕೀರ್ತನೆ’ ಕೇಳುವುದರ ಜೊತೆಗೆ ಗೋಲ್ಡನ್ ಟೆಂಪಲ್ನಲ್ಲಿ ಭಕ್ತರ ಪಾತ್ರೆಗಳು ಮತ್ತು ಬೂಟುಗಳನ್ನು ಒಂದು ಗಂಟೆ ಸ್ವಚ್ಛಗೊಳಿಸಲು ಕೇಳಲಾಯಿತು. ಅಕಾಲ್ ತಖ್ತ್ ನಿಂದ ಸುಖ್ಬೀರ್ ಬಾದಲ್ ‘ತಂಖೈಯಾ’ (ಧಾರ್ಮಿಕ ದುಷ್ಕೃತ್ಯದ ತಪ್ಪಿತಸ್ಥ) ಎಂದು ಘೋಷಿಸಿದ ಸುಮಾರು ಮೂರು ತಿಂಗಳ ನಂತರ ಈ ಶಿಕ್ಷೆಯನ್ನು ನೀಡಲಾಗಿದೆ.
ಇನ್ನು ವಿಚಾರಣೆ ವೇಳೆ ಜತೇದಾರ್ ಅವರು 2007 ರಿಂದ 2017 ರವರೆಗಿನ ಸಂಪೂರ್ಣ ಅಕಾಲಿ ಕ್ಯಾಬಿನೆಟ್, ಪಕ್ಷದ ಕೋರ್ ಕಮಿಟಿ ಮತ್ತು 2015 ರ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ ಆಂತರಿಕ ಸಮಿತಿಯನ್ನು ಕರೆದಿದ್ದರು.