ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಪಂಜಾಬ್ ರೈತ ಸಂಘಟನೆಗಳು ಇಂದು ಚಂಡೀಗಢ ಚಲೋಗೆ ಕರೆ ನೀಡಿವೆ. ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿ ಚಂಡೀಗಢಕ್ಕೆ ತೆರಳಿ ಅನಿರ್ದಿಷ್ಟಾವದಿ ಪ್ರತಿಭಟನೆಗೆ ಸಜ್ಜಾಗಿದ್ದು, ಒಂದು ವೇಳೆ ಪೊಲೀಸರು ತಡೆದರೆ, ಎಲ್ಲಿ ತಡೆಯುತ್ತಾರೋ ಅಲ್ಲಿಯೇ ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ರೈತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಚಂಡೀಗಢ ಪೊಲೀಸರು ಎಲ್ಲಾ ಪ್ರವೇಶಗಳನ್ನು ಮುಚ್ಚಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸದಂತೆ ಪ್ರಯಾಣಿಕರಿಗೆ ಸೂಚಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಜೋಗಿಂದರ್ ಸಿಂಗ್ ಉಘ್ರಹಾನ್ ರಸ್ತೆಗಳು, ಹೆದ್ದಾರಿಗಳು ಮತ್ತು ರೈಲುಗಳನ್ನು ತಡೆಯಲು ರೈತರಿಗೆ ಮನವಿ ಮಾಡಿದ್ದಾರೆ. ಹಾಗೆಯೇ ಎಲ್ಲಾ ರೈತ ಸಂಘಟನೆಗಳು ಚಂಡೀಗಢ ತಲುಪಿ ಮೋರ್ಚಾ ಸೇರುವ ಮೂಲಕ ಬೃಹತ್ ಪ್ರತಿಭಟನೆಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ. ಆದರೆ, ರೈತರ ಪ್ರತಿಭಟನೆಗೆ ಚಂಡೀಗಢದಲ್ಲಿ ಇನ್ನೂ ಸ್ಥಳಾವಕಾಶದ ಅನುಮತಿ ದೊರೆತಿಲ್ಲ. ಹೀಗಾಗಿ, ಅವರನ್ನು ನಗರದ ಪ್ರವೇಶದ ಪಾಯಿಂಟ್ಗಳಲ್ಲೇ ತಡೆದು ನಿಲ್ಲಿಸುವ ಪ್ರಯತ್ನ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.