ತಾಯಿ, ಮಗಳು, ನಾಯಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪಂಜಾಬ್ ವ್ಯಕ್ತಿ: ಹಾಲು ತರಲು ಹೋಗಿದ್ದ ಪತ್ನಿ ಸೇಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿರೋಮಣಿ ಅಕಾಲಿ ದಳದ ಪ್ರಮುಖ ಮುಖಂಡ ತನ್ನ ತಾಯಿ, ಮಗಳು ಮತ್ತು ಸಾಕು ನಾಯಿಗೆ ಗುಂಡಿಕ್ಕಿ ಕೊಲೆಗೈದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್​ನ ಬರ್ನಾಲಾ ಜಿಲ್ಲೆಯಲ್ಲಿ ನಡೆದಿದೆ.

ಅಕಾಲಿ ದಳದ ನಾಯಕ ಕುಲಬೀರ್ ಸಿಂಗ್ ಮಾನ್, ತಾಯಿ ಬಲ್ವಂತ್ ಕೌರ್ (85), ಮಗಳು ನಿಮ್ರತ್ ಕೌರ್ (21) ಎಂಬುವರೇ ಮೃತರು ಎಂದು ಗುರುತಿಸಲಾಗಿದೆ.

ಮನ್ ಸಿಂಗ್ ಪರವಾನಗಿಯ ರಿವಾಲ್ವರ್‌ನಿಂದ ಪುತ್ರಿ ನಿಮ್ರತ್ ಕೌರ್​ ಅವರಿಗೆ ಮೊದಲು ಗುಂಡಿಕ್ಕಿದ್ದಾರೆ. ಬಳಿಕ ತಾಯಿ ಬಲ್ವಂತ್ ಕೌರ್ ಮತ್ತು ಸಾಕು ನಾಯಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಕೃತ್ಯದ ಬಳಿಕ ರಿವಾಲ್ವರ್‌ನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಖರಿವಾಲಾ ಚೌಕ್‌ನ ರಾಮರಾಜ್ಯ ಕಾಲೋನಿಯಲ್ಲಿ ಕುಲಬೀರ್ ಸಿಂಗ್ ಮಾನ್ ಮನೆ ಇದೆ. ಬೆಳಗ್ಗೆ ಕುಲಬೀರ್ ಸಿಂಗ್ ಪತ್ನಿ ರಮಣದೀಪ್ ಕೌರ್ ಹಾಲು ತರಲು ಹೊರಗೆ ಹೋಗಿದ್ದರು. ವಾಪಸ್​​ ಬರುವಷ್ಟರಲ್ಲಿ ಮನೆಯ ಗೇಟ್‌ ಒಳಗಿನಿಂದ ಲಾಕ್‌ ಆಗಿತ್ತು. ಇದನ್ನು ಗಮನಿಸಿದ ಕೌರ್ ಕೂಡಲೇ ಕಾಲೋನಿಯ ವಾಚ್‌ಮ್ಯಾನ್‌ಗೆ ಕರೆ ಮಾಡಿ ಗೇಟ್​ಅನ್ನು ತೆಗೆಸಿದ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್​ಪಿ) ಸತ್ವೀರ್ ಸಿಂಗ್ ಹೇಳಿದ್ದಾರೆ.

ಕೌರ್ ನಂತರ ಮನೆಯೊಳಗೆ ಹೋಗಿದ್ದಾರೆ. ಆಗ ಒಂದೇ ಕೋಣೆಯಲ್ಲಿ ಪತಿ ಹಾಗೂ ಮಗಳ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ. ಸ್ವಲ್ಪ ಸಮಯದ ನಂತರ ಆಕೆ ಮತ್ತೊಂದು ಕೋಣೆಗೆ ಹೋದಾಗ ಅತ್ತೆ ಮತ್ತು ಸಾಕು ನಾಯಿಯ ಶವ ಕಂಡಿದ್ದಾರೆ. ಈ ಘಟನೆ ವಿಷಯ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಕೊಲೆ, ಆತ್ಮಹತ್ಯೆಗೆ ಬಳಸಿದ್ದ ರಿವಾಲ್ವರ್‌ಅನ್ನು ಪೊಲೀಸ್ ತಂಡ ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಕುಲಬೀರ್ ಸಿಂಗ್ ಮಗಳು ನಿಮ್ರತ್ ಕೌರ್ ಕೆನಡಾದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇತ್ತೀಚೆಗೆಷ್ಟೇ ಊರಿಗೆ ಮರಳಿದ್ದರು. ಪ್ರಾಥಮಿಕ ತನಿಖೆಯ ನಂತರ, ಕುಲಬೀರ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಔಷಧಿಗಳನ್ನೂ ತೆಗೆದುಕೊಳ್ಳುತ್ತಿದ್ದರು. ಸದ್ಯ ಪತ್ನಿಯ ಹೇಳಿಕೆ ಆಧರಿಸಿ, ಐಪಿಸಿ ಸೆಕ್ಷನ್ 174ರಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸರು ಮತ್ತು ಇತರ ವಿಧಿವಿಜ್ಞಾನ ತಂಡಗಳು ಹೆಚ್ಚಿನ ತನಿಖೆ ನಡೆಸುತ್ತಿವೆ ಎಂದು ಡಿಎಸ್​ಪಿ ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here