ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 46 ವರ್ಷಗಳ ಬಳಿಕ ಒಡಿಶಾದ ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದ ಕೋಣೆಗಳನ್ನು ತೆರೆಯಲಾಗಿದ್ದು, ಆ ಮೂಲಕ ಹಲವು ವರ್ಷಗಳಿಂದ ಭಕ್ತರಲ್ಲಿ ಹಾಗೂ ದೇಗುಲದ ನಿಗೂಢ ಕೋಣೆಯಲ್ಲಿ ಅಡಗಿರುವ ಕುತೂಹಲಗಳಿಗೆ ತೆರೆ ಬೀಳುತ್ತಿದೆ.
ಕೋಣೆಗಳಿಂದ ಬಂಗಾರ, ಬೆಳ್ಳಿ, ವಜ್ರ ವೈಢೂರ್ಯಗಳಿರುವ ಪೆಟ್ಟಿಗೆಗಳನ್ನು ಹೊರ ತರಲಾಗುತ್ತಿದೆ. ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರವನ್ನು 1978ರಲ್ಲಿ ತೆರೆಯಲಾಗಿತ್ತು.
1978ರಲ್ಲಿ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆಗೆದಿದ್ದಾಗ 128.38 ಕೆ.ಜಿ ಚಿನ್ನ ಸಿಕ್ಕಿತ್ತು. ಚಿನ್ನದ ಸುಮಾರು 454 ಆಭರಣಗಳು ದೊರಕಿದ್ದವು. ಇನ್ನು, ಇದೇ ಖಜಾನೆಯಲ್ಲಿ 221.53 ಕೆ.ಜಿ ಬೆಳ್ಳಿ ಇತ್ತು. ಬೆಳ್ಳಿಯ 293 ಆಭರಣಗಳು ದೊರಕಿದ್ದವು. ಆಗ ಸುಮಾರು 70 ದಿನಗಳವರೆಗೆ ಅಧಿಕಾರಿಗಳು ಶೋಧನೆ ನಡೆಸಿದ್ದರು. ಈಗ ಮತ್ತೆ ರತ್ನ ಭಂಡಾರದ ಆಭರಣಗಳನ್ನು ಲೆಕ್ಕ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ.
ಒಡಿಶಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದೆ. ಸರ್ಕಾರದ ಅನುಮೋದನೆಯನ್ನು ಪಡೆದ ನಂತರ, ದಾಸ್ತಾನುಗಳಿಗೆ ಮಾರ್ಗದರ್ಶನ ನೀಡಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOP)ಸ್ಥಾಪಿಸಲಾಯಿತು. ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತವು (SJTA), ಅದರ ಮುಖ್ಯ ಆಡಳಿತಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದೆ.
11 ಮಂದಿ ತಂಡದಿಂದ ರತ್ನ ಭಂಡಾರ ಪ್ರವೇಶ
ಖಜಾನೆ ತೆರೆದ ಬಳಿಕ 11 ಮಂದಿಯ ತಂಡ ಒಳಗೆ ಹೋಗಿತ್ತು.ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತದ ಅಧಿಕಾರಿ (SJTA), ಪುರಿ ಕಲೆಕ್ಟರ್, ASI ಸೂಪರಿಂಟೆಂಡೆಂಟ್ , SJTA ಯ ರತ್ನ ಭಂಡಾರ ಉಪ ಸಮಿತಿಯ ಸದಸ್ಯ, ಒಡಿಶಾ ರಾಜ್ಯ ಸರ್ಕಾರ ರಚಿಸಿದ ಮೇಲ್ವಿಚಾರಣಾ ಸಮಿತಿಯ ಇಬ್ಬರು ಸದಸ್ಯರನ್ನು ಒಳಗೊಂಡಿತ್ತು. ಸರ್ಕಾರವು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು, ಗಜಪತಿ ಮಹಾರಾಜರ ಪ್ರತಿನಿಧಿ (ಪುರಿಯ ಹಿಂದಿನ ರಾಜ) ಮತ್ತು ದೇವಾಲಯದ ಸೇವಕರ ಸಮುದಾಯದ ನಾಲ್ಕು ಜನರು ಸೇರಿದಂತೆ ಒಟ್ಟು 11 ಮಂದಿ ತಂಡದಲ್ಲಿದ್ದರು.
ಅನಂಗಭೀಮ ದೇವ ಕ್ರಿಶ 1238ರವರೆಗೆ ಒಡಿಶಾ ಪ್ರದೇಶದ ರಾಜನಾಗಿದ್ದ. ಈತನ ಅಧಿಕಾರದ ಅವಧಿಯಲ್ಲಿ ಪುರಿ ದೇವಾಲಯಕ್ಕೆ 1.25 ಲಕ್ಷ ತೊಲ ಚಿನ್ನವನ್ನು ದಾನವಾಗಿ ನೀಡಿದ್ದ ಎಂಬ ಇತಿಹಾಸ ಇದೆ. 1465ರಲ್ಲಿ ರಾಜ ಕಪಿಲೇಂದ್ರ ದೇವ್ ಕೂಡ ಸಾಕಷ್ಟು ಚಿನ್ನವನ್ನು ದಾನ ಮಾಡಿರುವ ಬಗ್ಗೆ ಉಲ್ಲೇಖ ಇದೆ.
1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯವನ್ನು ಸಮಿತಿ ಲೆಕ್ಕ ಹಾಕಿತ್ತು. ಆದರೆ ಅದರ ಪೂರ್ತಿ ಮಾಹಿತಿಯನ್ನು ಸರ್ಕಾರ ಸಾರ್ವಜನಿಕಗೊಳಿಸಿರಲಿಲ್ಲ. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. 2018ರಲ್ಲಿ ಒಡಿಶಾ ಸರ್ಕಾರಕ್ಕೆ ದೇವಸ್ಥಾನದ ರತ್ನ ಭಂಡಾರದ ಕೋಣೆಯ ಬಾಗಿಲು ತೆರೆದು ನಿಧಿಯ ಮೌಲ್ಯ ಮಾಪನ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.
ಇದನ್ನೆಲ್ಲ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಳಸಿ…