ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುರಿಯ ಜಗನ್ನಾಥ ದೇವಾಲಯದ ಖಜಾನೆಯಾದ ರತ್ನ ಭಂಡಾರವನ್ನು ಇಂದು ಮತ್ತೆ ತೆರೆಯಲಾಯಿತು.
ಬರೋಬ್ಬರಿ 46ವರ್ಷಗಳ ಬಳಿಕ ಕಳೆದ ವಾರವಷ್ಟೇ ಪುರಿ ಜಗನ್ನಾಥನ ರತ್ನ ಭಂಡಾರವನ್ನು ತೆರೆಯಲಾಗಿತ್ತು. ಇದೀಗ ಇಂದು ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ತೆರೆಯಲಾಗಿದೆ. ಅಲ್ಲಿನ ದುರಸ್ತಿಕಾರ್ಯ ಮತ್ತು ಆಭರಣಗಳ ಲೆಕ್ಕಹಾಕುವ ಪ್ರಕ್ರಿಯೆಗಾಗಿ ಅವುಗಳನ್ನು ತಾತ್ಕಾಲಿಕ ಸ್ಟ್ರಾಂಗ್ ರೂಮ್ ಗೆ ಸ್ಥಳಾಂತರಿಸಲಾಗಿದೆ .
ಇಂದು ಬೆಳಗ್ಗೆ 9.51ಕ್ಕೆ ರತ್ನ ಭಂಡಾರವನ್ನು ಪುನಃ ತೆರೆಯಲಾಗಿದ್ದು, ಪುರಿ ಜಗನ್ನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಒಡಿಶಾ ಸರ್ಕಾರವು ಸ್ಥಾಪಿಸಿದ ಮೇಲ್ವಿಚಾರಣಾ ಸಮಿತಿಯ ಸದಸ್ಯರು ಭಂಡಾರವನ್ನು ತೆರೆದು ಅದರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಸ್ಥಳಾಂತರಿಸಿದರು.
ದೇವಸ್ಥಾನ ಪ್ರವೇಶಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಮತ್ತು ಒರಿಸ್ಸಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿಸ್ವನಾಥ್ ರಾತ್,’ಭಂಡಾರದ ಒಳಕೋಣೆಯೊಳಗೆ ಸಂಗ್ರಹವಾಗಿರುವ ಎಲ್ಲಾ ಬೆಲೆಬಾಳುವ ವಸ್ತುಗಳ ಸ್ಥಳಾಂತರವನ್ನು ಸುಗಮವಾಗಿ ಪೂರ್ಣಗೊಳಿಸಲು ನಾವು ಜಗನ್ನಾಥನ ಆಶೀರ್ವಾದವನ್ನು ಕೋರಿದ್ದೇವೆ’ ಎಂದು ಹೇಳಿದರು.
1978ರಲ್ಲಿ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆಗೆದಿದ್ದಾಗ 128.38 ಕೆ.ಜಿ ಚಿನ್ನ ಸಿಕ್ಕಿತ್ತು. ಚಿನ್ನದ ಸುಮಾರು 454 ಆಭರಣಗಳು ದೊರಕಿದ್ದವು. ಇನ್ನು, ಇದೇ ಖಜಾನೆಯಲ್ಲಿ 221.53 ಕೆ.ಜಿ ಬೆಳ್ಳಿ ಇತ್ತು. ಬೆಳ್ಳಿಯ 293 ಆಭರಣಗಳು ದೊರಕಿದ್ದವು. ಆಗ ಸುಮಾರು 70 ದಿನಗಳವರೆಗೆ ಅಧಿಕಾರಿಗಳು ಶೋಧನೆ ನಡೆಸಿದ್ದರು. ಈಗ ಮತ್ತೆ ರತ್ನ ಭಂಡಾರದ ಆಭರಣಗಳನ್ನು ಲೆಕ್ಕ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ.