ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ ‘ಜುಗಾರಿ ಕ್ರಾಸ್’ ಇದೀಗ ಸಿನಿಮಾ ರೂಪ ಪಡೆಯುತ್ತಿದೆ. ಈ ಕಾದಂಬರಿಯ ಆಧಾರದ ಮೇಲೆ ನಿರ್ಮಾಣವಾಗುತ್ತಿರುವ ಚಿತ್ರವನ್ನು ‘ಅಂಬಿ ನಿಂಗ್ ವಯಸ್ಸಾಯ್ತೋ’ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ನಿರ್ದೇಶಿಸಲಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಚಿತ್ರದ ಮೊದಲ ಟೀಸರ್ ಮೂಲಕ ರಾಜ್ ಬಿ ಶೆಟ್ಟಿ ಈ ಸಿನಿಮಾದ ನಾಯಕನಾಗಿರುವುದು ಅಧಿಕೃತವಾಗಿದೆ.
ತೇಜಸ್ವಿಯವರ ಕೃತಿ ‘ಜುಗಾರಿ ಕ್ರಾಸ್’ ಅದರ ಆಳವಾದ ಕಥಾಹಂದರ, ಪ್ರಕೃತಿ ಹಿನ್ನೆಲೆ ಮತ್ತು ಮಾನವೀಯ ಸಂಬಂಧಗಳ ವಿಶಿಷ್ಟ ಚಿತ್ರಣಕ್ಕಾಗಿ ಜನಪ್ರಿಯವಾಗಿದೆ. ಈಗ ಈ ಕಥೆ ಬೆಳ್ಳಿತೆರೆಗೆ ಬರುವುದರಿಂದ ಕನ್ನಡ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದೆ. ಟೀಸರ್‌ನಲ್ಲಿ ತಲೆ ಬುರಡೆ, ರಕ್ತದ ಹನಿ ಮತ್ತು ಕೆಂಪು ರತ್ನದ ದೃಶ್ಯಗಳು ಸಸ್ಪೆನ್ಸ್ ಹಾಗೂ ತೀವ್ರತೆಯ ನೋಟ ನೀಡುತ್ತವೆ.
ಚಿತ್ರದ ಛಾಯಾಗ್ರಹಣವನ್ನು ಅಭಿಮನ್ಯು ಸದಾನಂದನ್ ನಿರ್ವಹಿಸಲಿದ್ದು, ಸಂಗೀತವನ್ನು ಸಚಿನ್ ಬಸ್ರೂರು ಸಂಯೋಜಿಸಲಿದ್ದಾರೆ. ಗುರುದತ್ ಗಾಣಿಗ ಈಗಾಗಲೇ ‘ಕರಾವಳಿ’ ಚಿತ್ರದ ನಂತರ ಈ ಹೊಸ ಪ್ರಾಜೆಕ್ಟ್‌ನ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ‘ಜುಗಾರಿ ಕ್ರಾಸ್’ ಸಿನಿಮಾವನ್ನು ಸಾಹಿತ್ಯ ಪ್ರೇಮಿಗಳು ಹಾಗೂ ಸಿನಿರಸಿಕರು ಉತ್ಸಾಹದಿಂದ ಎದುರುನೋಡುತ್ತಿದ್ದಾರೆ.

