ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ನಲ್ಲಿ ರಷ್ಯಾ ಯುದ್ಧ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಷ್ಯಾದ ವಿರುದ್ಧ ಸೋಮವಾರ ಪ್ರಮುಖ ಹೇಳಿಕೆಯೊಂದನ್ನು ನೀಡುವುದಾಗಿ ಹೇಳಿರುವ ಅಮೆರಿಕ ಅಧ್ಯಕ್ಷ, ಉಕ್ರೇನ್‌ಗೆ ಹೆಚ್ಚು ಅಗತ್ಯವಿರುವ ಶಸ್ತ್ರಾಸ್ತ್ರವನ್ನು ಕಳುಹಿಸುವುದಾಗಿ ಘೋಷಿಸಿದರು.
ಸುಮಾರು ಮೂರು ವರ್ಷಗಳಿಂದ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದೆ. ಈ ಬೇಸಿಗೆಯಲ್ಲಿ ತೀವ್ರಗತಿಯ ದಾಳಿ ನಡೆದಿತ್ತು. ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕದ ನೇತೃತ್ವದಲ್ಲಿ ನಡೆಯುತ್ತಿರುವ ಮಾತುಕತೆಗಳು ಇದುವರೆಗೂ ಯಾವುದೇ ಫಲ ಪ್ರದವಾಗಿಲ್ಲ.
ಪುಟಿನ್ ಚೆನ್ನಾಗಿ ಮಾತನಾಡುತ್ತಾರೆ. ನಂತರ ಎಲ್ಲರಿಗೂ ಬಾಂಬ್ ಹಾಕ್ತಾರೆ ಎಂದು ಹೇಳಿರುವ ಟ್ರಂಪ್, ಉಕ್ರೇನ್‌ಗೆ ವಾಯು ರಕ್ಷಣಾ ವ್ಯವಸ್ಥೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದ ಶ್ವೇತ ಭವನ ಇದೀಗ ಉಲ್ಟಾ ಹೊಡೆದಿದೆ.
ಉಕ್ರೇನ್ ಗೆ Patriot ವಾಯು ರಕ್ಷಣಾ ವ್ಯವಸ್ಥೆ ಕಳುಹಿಸುತ್ತೇವೆ. ಅದು ಅವರಿಗೆ ತೀರಾ ಅಗತ್ಯವಿದೆ ಎಂದು ಹೇಳಿದರು. ಆದರೆ, ಉಕ್ರೇನ್‌ಗೆ ಎಷ್ಟು ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಾರೆ ಎಂಬುದನ್ನು ನಿರ್ದಿಷ್ಟಪಡಿಸಲಿಲ್ಲ.
ಶ್ವೇತಭವನವು ಈ ತಿಂಗಳ ಆರಂಭದಲ್ಲಿ ಉಕ್ರೇನ್ ಗೆ ಕೆಲವು ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿತ್ತು. ಇದೀಗ ಉಲ್ಟಾ ಹೊಡೆದಿದ್ದು, ಉಕ್ರೇನ್‌ಗೆ ಕಳುಹಿಸುವ ಕೆಲವು ಶಸ್ತ್ರಾಸ್ತ್ರಗಳಿಗೆ NATO ಯುನೈಟೆಡ್ ಸ್ಟೇಟ್ಸ್‌ಗೆ ಹಣ ಪಾವತಿಸುವ ಹೊಸ ಒಪ್ಪಂದವನ್ನು ಪ್ರಕಟಿಸಿದೆ.