ಹಾವೇರಿ: ಸರ್ಕಾರಿ ಆಸ್ಪತ್ರೆ ಎಂದರೆ ಆ ಗದ್ದಲ, ಚೀಟಿ ಮಾಡಿಸಲು ಸಾಲು ಸಾಲು, ಚಿಕಿತ್ಸೆಗಾಗಿ ವೈದ್ಯರನ್ನು ಕಾಯುವುದು ಹೀಗೆ ಹಲವು ಕಾರಣಕ್ಕೆ ಮೂಗು ಮುರಿಯುವವರಿಗೆ ಇದೀಗ ಹಾವೇರಿ ಜಿಲ್ಲಾಸ್ಪತ್ರೆ ಮಾದರಿ ಎನ್ನುವಂತಹ ಹೆಜ್ಜೆ ಇರಿಸಿದೆ.
ಸರಳ ಪ್ರಕ್ರಿಯೆ:
ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಇಲ್ಲಿನ ಜಿಲ್ಲಾಸ್ಪತ್ರೆ ಮತ್ತು ಆಡಳಿತ ವರ್ಗ ಕೂಡ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ. ಅದರ ಭಾಗವಾಗಿ ರೋಗಿಗಳ ಚೀಟಿ ಮಾಡಿಸಲು ದಿನ ನಿತ್ಯ ಸಾವಿರಾರು ಜನ ರೋಗಿಗಳು ಇಲ್ಲವೇ ಅವರ ಸಹಾಯಕರಾಗಿ ಬಂದವರು ಚೀಟಿ ಮಾಡಿಸುವಲ್ಲೇ ಹೈರಾಣಾಗುತ್ತಿದ್ದರು. ಆದರೆ, ಇದೀಗ ಕಳೆದ ಕೆಲ ದಿನಗಳಿಂದ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಚೀಟಿ ಮಾಡಿಸಲು ಕ್ಯೂಆರ್ ಕೋಡ್ ಪರಿಚಯಿಸಿದೆ.
ಅದಕ್ಕಾಗಿ ಔಷಧಿ ಕೌಂಟರ್ ಪಕ್ಕದಲ್ಲೇ ಒಂದು ಕ್ಯೂಆರ್ ಕೋಡ್ ಕೌಂಟರ್ ತೆರೆದಿದ್ದು, ಸ್ಮಾರ್ಟ್ ಫೋನ್ ಹೊಂದಿದವರು, ಕೌಂಟರ್‌ಗೆ ಅಂಟಿಸಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅವರಿಗೆ ಒಂದು ನಂಬರ್ ಬರುತ್ತದೆ. ಆ ನಂಬರ್ ಕೌಂಟರ್‌ನಲ್ಲಿವರು ವ್ಯಕ್ತಿಗೆ ತಿಳಿಸಿದರೆ ಸಾಕು, ಆತ ನಿಮಗೆ ನೋಂದಣಿ ಮಾಡಿದ ಚೀಟಿ ನೀಡಿ ಸಂಬಂಧಿತ ವೈದ್ಯರ ಕೋಣೆ ನಂಬರ್ ನೀಡಿ ಕಳುಹಿಸುತ್ತಾನೆ. ನೀವು ಬೆಳಗಿನಿಂದ ಸಾಲಲ್ಲಿ ನಿಂತು ಸುಸ್ತಾಗುವ ಸಂದರ್ಭಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆ ಆಡಳಿತ ವರ್ಗ ಕೈಗೊಂಡ ಈ ಕಾರ್ಯಕ್ಕೆ ರೋಗಿಗಳು ಮತ್ತು ಅವರ ಸಂಬಂಧಿಕರು ಭೇಷ್ ಎನ್ನುವಂತಾಗಿದೆ.
ಒತ್ತಡ ಕಡಿಮೆ:
ಪ್ರಸಕ್ತ ಜಿಲ್ಲಾಸ್ಪತ್ರೆಯಲ್ಲಿ ದಿನಂಪ್ರತಿ 1000-1100 ಜನರು ಚಿಕಿತ್ಸೆಗೆಂದು ಬರುತ್ತಿದ್ದು ಅವರ ಪೈಕಿ ಸುಮಾರು 250-300 ಜನರು ಈ ಕ್ಯೂಆರ್ ಕೋಡ್ ಬಳಸಿ ನೋಂದಣಿ ಮಾಡಿಕೊಳ್ಳುತ್ತಿರುವುದು ಚೀಟಿ ಮಾಡುವ ಸಿಬ್ಬಂದಿಗಳ ಮೇಲಿನ ಒತ್ತಡ ಮತ್ತು ಹೊರೆ ಕಡಿಮೆ ಮಾಡಲು ಸಹಾಯಕವಾಗಿದೆ.
ಡಿಜಿಟಲ್ ಯುಗಕ್ಕೆ ಸಾಥ್:
ಇತ್ತೀಚಿನ ದಿನಗಳಲ್ಲಿ ಡಿಜಿಟಲೀಕರಣದತ್ತ ಜಗತ್ತು ಸಾಗುತ್ತಿದ್ದು, ಸಮಾಜದ ಕೆಳಹಂತದವರೆಗೆ ಪರಿಚಯಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದರೆ ತಪ್ಪಾಗಲಾರದು. ಬಹುತೇಕ ಆನ್‌ಲೈನ್ ಪೇಮೆಂಟ್ ವ್ಯವಸ್ಥೆಯ ನಂತರದಲ್ಲಿ ಈ ಕ್ಯೂಆರ್ ಕೋಡ್ ಜನರಿಗೆ ಸುಲಭದ ಮಾರ್ಗ ಎನಿಸುತ್ತಿದೆ. ಆದರೆ ಅದರ ಬಳಕೆ ಕುರಿತ ಜಾಗೃತಿ ವ್ಯಾಪಕವಾಗಿ ಮೂಡಿದಲ್ಲಿ ಇದು ಯಶಸ್ವಿಯಾಗಲಿದೆ.
ನನ್ನ ಮೊಬೈಲ್‌ದಾಗ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನಂಬರ್ ಹೇಳಿದ್ರ ತಕ್ಷಣ ಚೀಟಿ ಆಕ್ಕೇತ್ರಿ, ಮೊದ್ಲ ಅರ್ಧ ದಿನಾ ಚೀಟಿಗೆ ಅಂತಾನ ಸಾಲಾಗಿ ನಿಲ್ಲಬೇಕಿತ್ತ, ಈಗ ಬಾಳ ಸುಲಭ ಆಗೇತ್ರಿ ಎಂದು ಚಿಕ್ಕಬಾಸೂರ ಗ್ರಾಮಸ್ತ ಸಂಗಪ್ಪ ನಿಂಗನಗೌಡ್ರ ತಿಳಿಸಿದರು.
ಇನ್ನೂ ಅನೇಕರಲ್ಲಿ ಸ್ಮಾರ್ಟ ಫೋನ್ ಇರದ ಕಾರಣ ಎಲ್ಲರಿಂದಲೂ ಇದರ ಸದ್ಬಳಕೆ ಆಗುತ್ತಿಲ್ಲ. ಆದರೆ ದಿನದಿಂದ ದಿನಕ್ಕೆ ಇದರ ಬಳಕೆ ಅಧಿಕವಾಗುತ್ತಿದೆ. ಪ್ರತಿ ದಿನ ಕ್ಯೂ ಆರ್ ಕೋಡ್ ಮೂಲಕ ಚೀಟಿ ಮಾಡಿಸುತ್ತಿದ್ದು, ಸಮಯದ ಉಳಿತಾಯ, ಶೀಘ್ರ ಚಿಕಿತ್ಸೆ ಸಾಧ್ಯವಾಗುತ್ತಿದೆ. ಎಂದು ಹಾವೇರಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಆರ್.ಪಿ. ಹಾವನೂರ ತಿಳಿಸಿದರು.