ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಬ್ಬರ ಜಗಳ ಮೂರನೆಯವರಿಗೆ ಲಾಭ ಅನ್ನೋ ಗಾದೆ ಮಾತು ಕೇಳಿರುತ್ತೇವೆ, ಆದರೆ ಇಲ್ಲಿ ಇಬ್ಬರ ಜಗಳದಿಂದ ಮೂರನೇ ವ್ಯಕ್ತಿ ಬಲಿಯಾಗಿದ್ದಾರೆ. ಹೌದು, ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಅಳಿಯ, ಮಗಳ ಜಗಳ ಬಿಡಿಸಲು ಹೋಗಿ ಅತ್ತೆ ಕೊಲೆಯಾದ ಘಟನೆ ನಡೆದಿದೆ.
ಅಶ್ವಿತ್ ಉನ್ನಿಸಾ (58) ಮೃತಪಟ್ಟವರು. ತುಮಕೂರು ತಾಲೂಕಿನ ಬೆಳಗುಂಬ ನಿವಾಸಿಯಾಗಿದ್ದ ಅಶ್ವಿತ್ ಉನ್ನಿಸಾ. ತಮ್ಮ ಮಗಳನ್ನು ಸೈಯದ್ ಸುಹೇಲ್ ಎಂಬ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದರು. ಕೆಲವು ವ್ಯಕ್ತಿಕ ಕಾರಣದಿಂದ ಪ್ರತಿ ದಿನ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು.
ಕಳೆದ ಎರಡು ದಿನದ ಹಿಂದೆ ಹೀಗೆ ಇಬ್ಬರು ಮತ್ತೆ ಜಗಳ ಮಾಡಿಕೊಂಡಿದ್ದರು. ಆದರೆ ಈ ಬಾರಿ ಜಗಳ ವಿಕೋಪಕ್ಕೆ ತಿರುಗಿತ್ತು. ಆದ್ದರಿಂದ ಮಗಳು ಅಮ್ಮನಿಗೆ ಕರೆ ಮಾಡಿ ಮನೆಗೆ ಬರುವಂತೆ ಕೇಳಿದ್ದಾಳೆ. ಇದರಂತೆ ಮಗಳ ಮಾತು ಕೇಳಿ ಮನೆಗೆ ಬಂದಿದ್ದ ಆಕೆಯ ತಾಯಿ ಇಬ್ಬರ ಜಗಳವನ್ನು ಬಿಡಿಸಲು ಹೋಗಿದ್ದಾರೆ. ಆದರೆ ಇದೆ ವೇಳೆ ಅಳಿಯ ಅತ್ತೆಯ ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.
ಜೋರಾಗಿ ತಲೆಗೆ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಶ್ವಿತ್ ಉನ್ನಿಸಾಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಶ್ವಿತ್ ಉನ್ನಿಸಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಲಾಗಿದೆ.