ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಟಿ ಅನುಷಾ ಹೆಗಡೆ ಅವರ ದಾಂಪತ್ಯ ಆರೇ ವರ್ಷಕ್ಕೆ ಮುರಿದು ಬಿದ್ದಿದೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ರಾಧಾ ರಮಣ’ ಧಾರಾವಾಹಿಯ ದೀಪಿಕಾ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಅನುಷಾ ಹೆಗಡೆ ಆ ಬಳಿಕ ಕೆಲವು ತೆಲುಗು ಧಾರಾವಾಹಿ ಹಾಗೂ ಕೆಲ ಕನ್ನಡ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ತೆಲುಗಿನ ‘ನಿನ್ನೆ ಪೆಳ್ಳಾಡತಾ’ ಧಾರಾವಾಹಿಯಲ್ಲಿ ನಟಿಸುವಾಗ ಸಹನಟರಾದ ಪ್ರತಾಪ್ ಸಿಂಗ್ ಅವರೊಟ್ಟಿಗೆ ಪ್ರೀತಿಯಲ್ಲಿದ್ದ ಅನುಷಾ ಹೆಗಡೆ, ಬಳಿಕ ಅವರನ್ನೇ ವಿವಾಹವಾದರು.
2020ರ ಫೆಬ್ರವರಿ ತಿಂಗಳಲ್ಲಿ ಇವರ ವಿವಾಹ ಹೈದರಾಬಾದ್ನ ತಾರಮತಿ ಬಾರಾದಾರಿ ಅರಮನೆಯಲ್ಲಿ ಬಲು ಅದ್ಧೂರಿಯಾಗಿ ನೆರವೇರಿತ್ತು. ಟಿವಿ ಹಾಗೂ ಚಿತ್ರರಂಗದ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಸುಮಾರು 5 ಗಂಟೆಗಳ ಕಾಲ ಇವರ ವಿವಾಹ ಶಾಸ್ತ್ರಗಳು ನಡೆದಿದ್ದು ವಿಶೇಷವಾಗಿತ್ತು. ಐದು ಗಂಟೆಗಳ ಶಾಸ್ತ್ರ ನಡೆದ ಹೊರತಾಗಿಯೂ ಇವರ ವಿವಾಹ ಆರೇ ವರ್ಷಕ್ಕೆ ಮುರಿದು ಬಿದ್ದಿದೆ.
2023ರಲ್ಲೇ ಈ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿಗಳು ಹರಿದಾಡಲು ಆರಂಭಿಸಿದ್ದವು. ಆದರೆ ಅನುಷಾ ಅವರು ಇದನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ಅಧಿಕೃತವಾಗಿ ಅನುಷಾ ಅವರೇ ವಿಚ್ಛೇದನವನ್ನು ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಅನುಷಾ, ‘2023ರಿಂದಲೂ ದಾಂಪತ್ಯದಲ್ಲಿ ಏರಿಳಿತಗಳನ್ನು ಅನುಭವಿಸುತ್ತಿರುವುದು ಹಲವರಿಗೆ ಗೊತ್ತಿದೆ. ಇದೀಗ 2025 ರಲ್ಲಿ ನಾವು ಅಧಿಕೃತವಾಗಿ, ಕಾನೂನಾತ್ಮಕವಾಗಿ ದೂರಾಗಿದ್ದೇವೆ’ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಹೆಚ್ಚು ಚರ್ಚಿಸುವುದಕ್ಕೆ ತಮಗೆ ಇಷ್ಟವಿಲ್ಲ ಎಂದು ಸಹ ಹೇಳಿದ್ದಾರೆ.
ಅನುಷಾ ಹೆಗಡೆ ಅವರು ‘ಎನ್ಎಚ್ 37’ ಸಿನಿಮಾನಲ್ಲಿ 2016 ನಟಿಸಿದ್ದರು, ಒಳ್ಳೆಯ ನೃತ್ಯಗಾರ್ತಿ ಆಗಿದ್ದ ಅನುಷಾ, ‘ಬಣ್ಣ ಬಣ್ಣದ ಬದುಕು’ ಸಿನಿಮಾಕ್ಕೆ ನೃತ್ಯ ನಿರ್ದೇಶನ ಮಾಡಿದ್ದರು. 2017ರಲ್ಲಿ ಪ್ರಸಾರವಾದ ‘ರಾಧಾ ರಮಣ’ ಧಾರಾವಾಹಿಯಲ್ಲಿ ನಟಿಸಿದ್ದರು.



