ಕಲಬುರಗಿಯಲ್ಲಿ ಕಾಂಗ್ರೆಸ್​ನ ರಾಧಾಕೃಷ್ಣ ದೊಡ್ಡಮನಿಗೆ ಗೆಲುವು

ಹೊಸದಿಗಂತ ವರದಿ: ಕಲಬುರಗಿ:

ಲೋಕಸಭಾ ಚುನಾವಣೆ-2024 ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಮೀಸಲು ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್​ನ ರಾಧಾಕೃಷ್ಣ ದೊಡ್ಡಮನಿ ಬಿಜೆಪಿಯ ಡಾ. ಉಮೇಶ್ ಜಾಧವ ಪರಭಾವಗೊಳಿಸುವ ಮೂಲಕ ಕಲಬುರಗಿ ಕೋಟೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದಾರೆ.

​ತೊಗರಿ ಕಣಜ ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತೀರ್ವ ಪೈಪೋಟಿಗೆ ಸಾಕ್ಷಿಯಾಗಿತ್ತು. ಕಾಂಗ್ರೆಸ್​ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​​ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಡಾ. ಉಮೇಶ ಜಾಧವ ಸ್ಪರ್ಧಿಸಿದ್ದರು. ಕಾಂಗ್ರೆಸ್​ನ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ 27.205 ಮತಗಳ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಅಭ್ಯರ್ಥಿ ಡಾ.ಉಮೇಶ್​ ಜಾಧವ್​ ಅವರ ವಿರುದ್ಧ ಮೊದಲ ಬಾರಿಗೆ ಸೋಲು ಕಂಡರು. ಉಮೇಶ್ ಜಾಧವ್​ ಅವರು 6,20,192 ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಮಲ್ಲಿಕಾರ್ಜುನ್​ ಖರ್ಗೆ ಅವರು 5,24,740 ಮತಗಳನ್ನು ಪಡೆದು 95 ಸಾವಿರ ಅಂತರದಿಂದ ಸೋಲುಂಡಿದರು. ಇದೀಗ ಮಾವನ ಸೋಲಿನ ಸೇಡು ಅಳಿಯ ತೀರಿಸಿಕೊಂಡಿದ್ದಾರೆ.

ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಅಖಾಡಕ್ಕೆ ಕಾಂಗ್ರೆಸ್ ಇಳಿಸಿತ್ತು. ಕಾಂಗ್ರೆಸ್ ಭದ್ರಕೋಟೆಯಾದ ಕಲಬುರಗಿಯನ್ನು ಮತ್ತೆ ತನ್ನ ತೆಕ್ಕೆಗೆ ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!