ಹೊಸದಿಗಂತ ವರದಿ ಹಾಸನ:
ಜಿಲ್ಲೆಯ ಮಲೆನಾಡ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೀಡುಬಿಟ್ಟಿರುವ ಒಂಬತ್ತು ಆನೆಗಳಿಗೆ ಇಂದಿನಿಂದ ಡಿಸೆಂಬರ್ 15ರವರೆಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಜ್ಜಾಗಿದೆ.
ಕೆಲ ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ್ದ ವೇಳೆ ಪುಂಡಾನೆ ದಾಳಿಗೆ ಶಾರ್ಪ್ ಶೂಟರ್ ವೆಂಕಟೇಶ್ ಬಲಿಯಾಗಿದ್ದರು. ನಂತರ ಮೈಸೂರು ದಸರಾ ಹಾಗೂ ಮಳೆಯಿದ್ದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಮಲೆನಾಡು ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಪ್ರಾಣ ಹಾನಿ, ಬೆಳೆ ಹಾನಿಗೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಹಾಗಾಗಿ ಅವುಗಳ ಚಲನವಲನಗಳನ್ನು ಗಮನಿಸಲು ರೇಡಿಯೋ ಕಾಲರ್ ಅಳವಡಿಕೆಗೆ ತಜ್ಞರ ತಂಡ ತಯಾರಿ ನಡೆಸಿದೆ.
ನ.24 ರಿಂದ ಡಿ.15ರವರಗೆ ಕಾರ್ಯಾಚರಣೆ
ಕಾಡಾನೆ ಸಮಸ್ಯೆ ಪರಿಹಾರ ಮಾರ್ಗ ಕಂಡುಕೊಳ್ಳಲು ಅರಣ್ಯ ಸಚಿವ ಈಶ್ವರ್‌ಖಂಡ್ರೆ ಅಧ್ಯಕ್ಷತೆಯಲ್ಲಿ, ಉನ್ನತ ಮಟ್ಟದ ಅರಣ್ಯಾಧಿಕಾರಿಗಳ ಸಭೆ ನಡೆಸಿದ ವೇಳೆ ಆಲೂರು, ಸಕಲೇಶಪುರ, ಬೇಲೂರು ಭಾಗದಲ್ಲಿ ಪ್ರತ್ಯೇಕ ಗುಂಪುಗಳಲ್ಲಿ ಇರುವ ಒಂಬತ್ತು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಅನುಮತಿ ಕೋರಲಾಗಿತ್ತು. ಅದಕ್ಕೆ ಅನುಮತಿ ದೊರೆತಿದ್ದು ನ.24 ರಿಂದ ಡಿ.15ರವರಗೆ ಕಾರ್ಯಾಚರಣೆ ನಡೆಯಲಿದೆ.
ಕಾಡಾನೆ ಸಮಸ್ಯೆಯಿಂದ ನೊಂದು, ಬೆಂದಿರುವ ಜನರ ಸಮಸ್ಯೆಗೆ ಒಂಬತ್ತು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಯಿಂದ ಪೂರ್ಣ ಪ್ರಮಾಣದಲ್ಲಿ ಸಮಸ್ಯೆ ನಿವಾರಣೆ ಆದಿತು ಎಂಬಂತಿಲ್ಲ. ಬದಲಾಗಿ ಕಾಡಾನೆ ಗುಂಪು ಯಾವ ಪ್ರದೇಶದಲ್ಲಿ ಇದೆ ಎಂಬುದನ್ನು ತಿಳಿದು ಕಾಡಾನೆ ಪ್ರದೇಶದ ಜನರಿಗೆ ಮಾಹಿತಿ ಜತೆಗೆ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ.
ಎಲ್ಲೆಲ್ಲಿ ಕಾರ್ಯಾಚರಣೆ
ಹಾಸನ ಜಿಲ್ಲೆಯ ಆಲೂರು ಸಕಲೇಶಪುರ, ಯಸಳೂರು, ಬೇಲೂರು ಅರಕಲಗೂಡು ತಾಲೂಕುಗಳ ಮಲೆನಾಡ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಬೇಲೂರು ತಾಲೂಕಿನ ಬಿಕ್ಕೋಡು ಎಷ್ಟೇಟ್‌ನಲ್ಲಿ ಕಾರ್ಯಾಚರಣೆಯನ್ನು ಅರಣ್ಯ ಆರಂಭ ಮಾಡಲಿದೆ.
ವಿಶೇಷ ತಜ್ಞರ ತಂಡ ಭಾಗಿ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯ ರಮೇಶ್, ಮಡೀಕೇರಿ ವಿಭಾಗದ ದುಬಾರೆಯಿಂದ ಉಪ ಅರಣ್ಯ ಅಧಿಕಾರಿ ರಂಜನ್, ನವೀನ್, ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್, ಎಸಿಎಫ್ ಫ್ರಭು ಸೇರಿದಂತೆ ವಿಶೇಷ ತಜ್ಞರ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಂಬತ್ತು ಸಾಕಾನೆಗಳ ಬಳಕೆ
ದುಬಾರೆಯಿಂದ ನಾಲ್ಕು ಸಾಕು ಆನೆಗಳು, ನಾಗರಹೊಳೆ ಅರಣ್ಯ ವಿಭಾಗ ರಾಜೀವ್ ಗಾಂಧಿ ಮತ್ತಿಗೋಡಿನಿಂದ ಸುಗ್ರಿವಾ, ಪ್ರಶಾಂತ್, ಧನಂಜಯ, ಅಭಿಮನ್ಯು, ಅಶೋಕ ಸೇರಿದಂತೆ ಒಟ್ಟು ಒಂಬತ್ತು ಸಾಕಾನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ.