ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯ್‌ಬರೇಲಿ, ಅಮೇಠಿ ನಮ್ಮ ಕುಟುಂಬದ ಕ್ಷೇತ್ರಗಳು ಎಂದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗೆ ತಿರುಗೇಟು ಕೊಟ್ಟ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇವು ಯಾವುದೇ ಕುಟುಂಬದ ಕ್ಷೇತ್ರಗಳಲ್ಲ, ಜನರ ಕ್ಷೇತ್ರಗಳು ಎಂದಿದ್ದಾರೆ.
ರಾಯ್‌ಬರೇಲಿ ಮತ್ತು ಅಮೇಠಿ ತಮ್ಮ ಕುಟುಂಬದ ಕ್ಷೇತ್ರಗಳು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಆದರೆ, ಈ ಕ್ಷೇತ್ರಗಳು ಯಾವುದೇ ಕುಟುಂಬಕ್ಕೆ ಸೇರಿದದವಲ್ಲ. ಎರಡೂ ಜಿಲ್ಲೆಗಳ ಬಡಯುವಕರಿಗೆ ಸೇರಿದ ಕ್ಷೇತ್ರಗಳು. ಅಮೇಠಿ ಮತ್ತು ರಾಯ್‌ಬರೇಲಿಯ ಯಾವೊಬ್ಬ ಯುವಕನೂ ಸಂಸತ್ತಿಗೆ ಹೋಗಬಹುದು’ ಎಂದರು.
ಅಮೇಠಿಯಲ್ಲಿ ಸ್ಮೃತಿ ಇರಾನಿ ಮತ್ತು ರಾಯ್‌ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್ ಗೆಲ್ಲುವ ಮೂಲಕ ಎರಡೂ ಕ್ಷೇತ್ರಗಳು ಬಿಜೆಪಿ ಕೈಸೇರಲಿವೆ ಎಂದರು.
ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾ,ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸರಿಯಾಗಿ ಆಗಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಒಂದೊಮ್ಮೆ, ‘ಇಂಡಿ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ರಾಮಮಂದಿರಕ್ಕೆ ಬಾಬರಿ ಮಸೀದಿಯ ಬೀಗ ಜಡಿಯಲಿದ್ದಾರೆ’ಎಂದು ಟೀಕಿಸಿದರು.