July 7, 2026
Tuesday, July 7, 2026
spot_img

ರಾಹುಲ್ ಗಾಂಧಿ ದ್ವಿಪೌರತ್ವ ಹೊಂದಿದ್ದಾರೆ: ಸಂಸದ ಗೋವಿಂದ ಕಾರಜೋಳ ಆರೋಪ

ಹೊಸದಿಗಂತ ವರದಿ ಚಿತ್ರದುರ್ಗ:

ಎಸ್.ಐ.ಆರ್.ನಿಂದ ಕಾಂಗ್ರೆಸ್‌ನವರು ಭಯಭೀತರಾಗಿದ್ದಾರೆ. ಅದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದವರು ಎಸ್.ಐ.ಆರ್. ವಿರೋಧ ಮಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿಕಾರಿದ್ದಾರೆ.

ಚಿತ್ರದುರ್ಗ ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎರಡು ರಾಷ್ಟ್ರಗಳಿಂದ ಪೌರತ್ವ ಪಡೆದಿದ್ದಾರೆ. ಎಸ್.ಐ.ಆರ್.ನಿಂದ ರಾಹುಲ್ ಗಾಂಧಿಯವರ ಗುಟ್ಟು ರಟ್ಟಾಗುತ್ತದೆ ಎಂಬ ಭೀತಿ ಕಾಂಗ್ರೆಸ್ ಪಕ್ಷದವರನ್ನು ಕಾಡುತ್ತಿದೆ. ರಾಹುಲ್ ಗಾಂಧಿಯವರ ದ್ವಿಪೌರತ್ವದ ಗುಟ್ಟು ಗುಟ್ಟು ರಟ್ಟಾದರೆ ಅವರ ಸಂಸತ್ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ ಎಂದರು.

ರಾಹುಲ್ ಗಾಂಧಿಯವರು 1994ರಿಂದಲೂ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ. ಎಸ್.ಐ.ಆರ್.ನಿಂದ ಬಡವರು, ದಲಿತರು ಯಾರೂ ಸಹ ಮತದಾನ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ದ್ರೋಹಿ ರಾಷ್ಟ್ರದಿಂದ ಬಂದ ಕೆಲವರು ಅಕ್ರಮವಾಗಿ ನಮ್ಮಲ್ಲಿ ನೆಲೆಸಿದ್ದಾರೆ. ಇದರಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಆಗುತ್ತಿದೆ. ಆ ಕಾರಣಕ್ಕಾಗಿ ಮನೆ ಮನೆಗೆ ಹೋಗಿ ಎಸ್.ಐ.ಆರ್. ಪ್ರಕ್ರಿಯೆ ನಡೆಸಬೇಕಿದೆ. ಆದರೆ ಕಾಂಗ್ರೆಸ್‌ನವರು ಮಸೀದಿ, ಮದರಸಾ, ಮಂದಿರಗಳಲ್ಲಿ ಎಸ್.ಐ.ಆರ್. ಮಾಡುತ್ತಿದ್ದಾರೆ. ಹೀಗೆ ಮಾಡುವುದು ತಪ್ಪು ಎಂದು ಹೇಳಿದರು.

ಕಾಂಗ್ರೆಸ್‌ನವರಿಗೆ ಪಾರದರ್ಶಕತೆ ಬೇಡವಾಗಿದೆ. ಅಕ್ರಮ ಎಸಗಿ ಜನರ ನಂಬಿಕೆ ಕಳೆದುಕೊಳ್ಳುವ ರೀತಿ ಕಾಂಗ್ರೆಸ್ ವರ್ತನೆಯಾಗಿದೆ. ಈ ಕುರಿತು ನಿನ್ನೆ ಚುನಾವಣೆ ಆಯೋಗಕ್ಕೆ ನಾವು ದೂರು ಸಲ್ಲಿಸಿದ್ದೇವೆ. ಸರಿಯಾದ ರೀತಿಯಲ್ಲಿ ಎಸ್.ಐ.ಆರ್. ನಡೆಸಿ ಎಂದು ಮನವಿ ಮಾಡಲಾಗಿದೆ. ನಮ್ಮ ದೇಶದಲ್ಲಿ ಬಾಂಗ್ಲಾ, ಪಾಕಿಸ್ತಾನದ ಕೆಲವು ವಲಸಿಗರು ನೆಲೆಸಿದ್ದಾರೆ. ಅವರನ್ನು ದೇಶದ ಪ್ರಜೆಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆಂಬ ಕಾರಣಕ್ಕೆ ಹುನ್ನಾರ ನಡೆದಿದೆ. ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ನಿಂದ ದೇಶದ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ:

ರಾಜ್ಯದಲ್ಲಿ ಬರ ಆವರಿಸಿದೆ. ನಮ್ಮ ಜಿಲ್ಲೆಯಲ್ಲಿ ಉಪ ಮುಖ್ಯಮಂತ್ರಿಗಳು ಇತ್ತೀಚೆಗೆ ಸಭೆ ನಡೆಸಿ ಹೋಗಿದ್ದಾರೆ. ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಬಿತ್ತನೆ ಕೂಡ ಕುಂಟಿತವಾಗಿದೆ. ಕೆಲವೆಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಾಗೆಯೇ ಮೇವಿನ ಸಮಸ್ಯೆ ಉಂಟಾಗಿದೆ. ಗೋಶಾಲೆಗಳನ್ನು ತೆರೆಯಬೇಕು ಹಾಗೂ ಖಾಸಗಿ ಗೋಶಾಲೆಗಳಿಗೆ ಸಮರ್ಪಕ ಮೇವು ಹಾಗೂ ಆರ್ಥಿಕ ಸೌಲಭ್ಯವನ್ನು ಸರ್ಕಾರ ಒದಗಿಸಬೇಕೆಂದು ಆಗ್ರಹಿಸುತ್ತೇನೆ. ಸರ್ಕಾರವೇ ರೈತರ ಪರವಾಗಿ ಬೆಳೆವಿಮೆ ಪಾವತಿ ಮಾಡಿ ರೈತರ ನೆರವಿಗೆ ನಿಲ್ಲಬೇಕು. ಕೇಂದ್ರದ ಎನ್.ಡಿ.ಆರ್.ಎಫ್. ಅನುದಾನಕ್ಕೆ ರಾಜ್ಯ ಸರ್ಕಾರ ಅರ್ಜಿಕ್ಕೆ ಸಲ್ಲಿಸಲಿ. ನಾನು ಸಹ ಅವರ ಜೊತೆ ಹೋಗುತ್ತೇನೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !